ಅಂಕೋಲಾ : ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ನನ್ನ ಆಸ್ತಿ. ಅವರಿಂದಲೇ ನಾನು 7 ಬಾರಿ ವಿಧಾನ ಪರಿಷತ್ ಪ್ರವೇಶಿಸುವ ಅಧಿಕಾರ ದೊರೆತಿದೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ದಿನದ 24 ಗಂಟೆ ನಿಮ್ಮ ಸಮಸ್ಯೆಗೆ ದ್ವನಿಯಾಗಿರುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಅವರು ರಾಜ್ಯ ಮಾದ್ಯಮಿಕ ನೌಕರರ ಸಂಘ ಅಂಕೋಲಾ ಇವರು ಜೈಹಿಂದ್ ಹೈಸ್ಕೂಲ್ ಸಭಾಭವನದಲ್ಲಿ ಆಯೋಜಿಸಿದ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕ-ನೌಕರರ ಸಮುದಾಯದೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ನಾನು 20 ತಿಂಗಳು ಶಿಕ್ಷಣ ಸಚಿವನಾಗಿದ್ದಾಗ 1452 ಕೋಟಿ ಬಜೆಟ್ ಹೆಚ್ಚುವರಿ ಮಾಡಿಸಿ ಶಿಕ್ಷಕ ಬಳಗಕ್ಕೆ ಸಹಕರಿಸಿದ್ದೇನೆ. ಪ್ರತಿ ಹಂತದಲ್ಲಿ ಶಿಕ್ಷಕರ ಮುಂಬಡ್ತಿ ಯಿಂದ ಹಿಡಿದು ಶಿಕ್ಷಕರಿಗೆ ಅನುಕೂಲ ಕಲ್ಪಿಸಿರುವ ವಿಚಾರ ತಮಗೆ ತಿಳಿದಿದೆ. ಕೇವಲ 11 ಜನ ಶಾಸಕರಿರುವ ಪಕ್ಷದ ನನ್ನನ್ನು ಎಲ್ಲ ಪಕ್ಷದವರು ಸೇರಿ ಸಭಾಪತಿ ಮಾಡಿದ್ದಾರೆ. ಎಲ್ಲರ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತೇನೆ ಎಂದರು.
ಭಾರತದೇಶದಲ್ಲಿ 7 ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವವರು ಯಾರು ಇಲ್ಲ. ಮುಂದಿನ ಚುನಾವಣೆಯಲ್ಲಿ ಇದು ಮೈಲಿಗಲ್ಲಾಗಬೇಕು ಎಂದರು.
ವಿವಿಧ ಸಂಘಟನೆಗಳು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ರವರನ್ನು ಸನ್ಮಾನಿಸಿ ಗೌರವಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳ ಲಕ್ಷ್ಮೀ ಪಾಟೀಲ್ ಜೈ ಹಿಂದ ಪ್ರೌಢ ಶಾಲೆಯ ಅಧ್ಯಕ್ಷ ಪದ್ಮನಾಭ ಪ್ರಭು, ವಿಶ್ರಾಂತ ಪ್ರಾಚಾರ್ಯ ರವೀಂದ್ರ ಕೇಣಿ, ಎಲ್ ಎಂ ಹೆಗಡೆ, ಎಸ್ ವಿ ವಸ್ತ್ರದ್, ಮಾತನಾಡಿದರು.
ವೇದಿಕೆಯಲ್ಲಿ ಎಂ ಡಿ ಗೌಡ ಉಪಸ್ಥಿತರಿದ್ದರು. ಜಿಲ್ಲಾ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ್ ಬಂಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಲೂಕಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ನಾಯಕ್ ಸ್ವಾಗತಿಸಿದರು. ಪಿ ಎಂ ಪ್ರೌಢ ಶಾಲೆಯ ಶಿಕ್ಷಕ ಜಿ ಆರ್ ತಾಂಡೆಲ್ ನಿರ್ವಹಿಸಿದರು. ಮನೋಜ್ ವಂದಿಸಿದರು.