ಕಾರವಾರ: ರಾಜ್ಯದ ಸರಕಾರಿ ನೌಕರ ಅಥವಾ ಆತನ ಕುಟುಂಬದ ಸದಸ್ಯರು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಒಳಪಟ್ಟ ಸಂದರ್ಭದಲ್ಲಿ ಹಾಗೂ ನೌಕರನ ವಾಸಿಸುವ ಪ್ರದೇಶವನ್ನು ಕಂಟೇನ್ಮೇಂಟ್ ಪ್ರದೇಶವೆಂದು ಘೋಷಿಸಿದ ಸಂದರ್ಭದಲ್ಲಿ ಅಂತಹ ಸರಕಾರಿ ನೌಕರರಿಗೆ ಗರಿಷ್ಠ 7 ದಿನಗಳನ್ನು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಸರಕಾರಿ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ನಿರ್ಧಾರ ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19 ರೋಗಕ್ಕೆ ಒಳಪಟ್ಟ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಸರಕಾರಿ ನೌಕರರಿಗೆ ಮಾತ್ರ ನೀಡಿ ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ನೀಡದೇ ಇರುವುದು ದ್ವಂದ್ವನೀತಿಯನ್ನು ಅನುಸರಿಸಿದಂತಾಗುತ್ತದೆ ಹಾಗೂ ಇದು ನ್ಯಾಯ ಸಮ್ಮತವಾದುದ್ದಲ್ಲ. ಆದ್ದರಿಂದ ಕೋವಿಡ್ -19 ನ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯವನ್ನು ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ವಿಸ್ತರಿಸಿ ಆದೇಶ ಹೊರಡಿಸಬೇಕೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ ಅವರಿಗೆ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರು ಪತ್ರ ಬರೆದು ಒತ್ತಾಯಿಸಿದ್ದಾರೆ.