ಕಾರವಾರ: ಪಂಚರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಸ್ಪಷ್ಟ ಬಹುಮತದೊಂದಿಗೆ ಗೆದ್ದು, ಸರ್ಕಾರ ರಚಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಭಾನುವಾರ ಶಾಸಕಿ ರೂಪಾಲಿ ಪುತ್ರನ ವಿವಾಹದಲ್ಲಿ ಭಾಗಿಯಾಗಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯು ಬಹು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ. ಮಾಧ್ಯಮದಲ್ಲಿ ಏನೇ ಬಂದರೂ ಸಹ ಗೋವಾದಲ್ಲೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಬಿಜೆಪಿಗೆ ಸಾಕಷ್ಟು ಬಲ ಬಂದಿದೆ ಎಂದು ಸಂತಸ ಹೊರಹಾಕಿದರು.
ಕೋವಿಡ್ ಕೊಂಚ ಕಡಿಮೆಯಾದ ಬಳಿಕ ರಾಜ್ಯದಲ್ಲಿ ಪ್ರವಾಸ ಕೈಗೊಂಡು, ಪ್ರತಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 135- 140 ಸೀಟುಗಳನ್ನು ಗೆಲ್ಲಲೇಬೇಕು. ಈ ಬಗ್ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಪಕ್ಷದ ಮುಖಂಡರ ಜೊತೆಯೂ ಸಮಾಲೋಚನೆ ನಡೆಸಿದ್ದೇನೆ. ನಿಶ್ಚಿತವಾಗಿ ಬಿಜೆಪಿ ಮುಂಬರುವ ದಿನದಲ್ಲೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ದೇಶ ಕಂಡ ಅಪ್ರತಿಮ ಗಾಯಕಿ ಲತಾ ಮಂಗೇಶ್ಕರ್ ಅವರು ದೈವಾಧೀನರಾಗಿರುವುದು ದೇಶದ ಜನರಿಗೆ ನೋವು ತರುವ ಸಂಗತಿ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬ ವರ್ಗದವರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.