ಜೋಯಿಡಾ: ಅರಣ್ಯ ಇಲಾಖೆಯು ಜೋಯಿಡಾ ತಾಲೂಕಿನ ಅರಣ್ಯ ಪ್ರದೇಶದಲ್ಲಿ ವಿವಿಧ ಜಾತಿಯ ಐದು ಸಾವಿರಕ್ಕೂ ಮಿಕ್ಕಿ ಮರ ಕಡಿದು, ಕೋಟ್ಯಾಂತರ ರೂಪಾಯಿ ಪರಿಸರ ಆರ್ಥಿಕ ಮೌಲ್ಯ ನಷ್ಟಕ್ಕೆ ಕಾರಣವಾದ ಹಾಗೂ ಅರಣ್ಯವಾಸಿಗಳ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯದ ಕ್ರಮವನ್ನು ಖಂಡಿಸಿ ಜೋಯಿಡಾ ತಾಲೂಕಿನಲ್ಲಿ ಫೇ. 10, ಗುರುವಾರ ದಂದು ಜೋಯಿಡಾದಲ್ಲಿ ಬೃಹತ್ ಪ್ರತಿಭಟನೆ ಸಂಘಟಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಾದ್ಯಂತ ಅಣಸಿ ವಲಯದ ಗಾಯತ್ರಿ ಗುಡ್ಡ, ಕುಂಭಾರವಾಡ ವಲಯದ ಹಳೇ ನರ್ಸರಿ, ಗುಂಜಾಳಿ, ಪಣಸೋಲಿ, ಸುಳಾವಳಿ, ಫೀರಸಾಯಿ, ಖಾರಂಜಿ, ಸಿಸೈ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನೆಲ್ಲಿಕಾಯಿ, ಕುಂಬಿ, ಹದ್ದಾ, ವನ್ಯಪ್ರಾಣಿ ತಿನ್ನುವ ಹಣ್ಣು ಹಂಪಲು, ನಂದಿ ವಿವಿಧ ಕಾಡು ಜಾತಿಯ ಮರಗಳನ್ನು ಸಕಾರಣವಿಲ್ಲದೇ ಕಾಳಿಹುಲಿಯೋಜನೆ ಪ್ರದೇಶದಲ್ಲಿ ಕಡಿದಿರುವುದರಿಂದ ವನ್ಯಪ್ರಾಣಿಗೆ ಆಹಾರ ಕೊರತೆ ಹಾಗೂ ಅರಣ್ಯ ಇಲಾಖೆಯ ಕರ್ತವ್ಯ ಲೋಪ ಸರಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಿರಂತರವಾಗಿ ಅರಣ್ಯ ಅಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಕಿರುಕುಳ ಮತ್ತು ಮಾನಸಿಕ ಹಿಂಸೆ ಜರಗುತ್ತಿರುವುದರಿಂದ ಆಸಕ್ತ ಅರಣ್ಯವಾಸಿಗಳು ಹೇಚ್ಚಿನ ಸಂಖ್ಯೆಯಲ್ಲಿ ಜೋಯಿಡಾ ಕುಣಬಿ ಭವನಕ್ಕೆ, ಮುಂಜಾನೆ 10 ಗಂಟೆಗೆ ಆಗಮಿಸಲು ತಿಳಿಸಿದ್ದಾರೆ.
ವಿವಿಧ ಅರಣ್ಯವಾಸಿಗಳ ಸಮಸ್ಯೆಗಳು :
ಅರಣ್ಯವಾಸಿಗಳು ಕಾಡಿನ ಕಿರು ಉತ್ಪನ್ನ ಅನುಭವಿಸುವ ಹಕ್ಕಿಗೆ ಒತ್ತಾಯಿಸಿ ಅರಣ್ಯವಾಸಿಗಳ ಮೇಲೆ ಕಿರುಕುಳ ನೀಡುವುದು, ಒತ್ತಾಯಪೂರ್ವಕವಾಗಿ ಹುಲಿ ಯೋಜನೆ ಪ್ಯಾಕೇಜಿನ ಮೂಲಕ ಸ್ಥಳೀಯರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದು, ಪ್ರತಿ ಸೋಮವಾರ ಅರಣ್ಯ ಅತಿಕ್ರಮಣದಾರರನ್ನ ಒಕ್ಕಲೆಬ್ಬಿಸಬೇಕೆಂಬ ಸರಕಾರದ ಆದೇಶದ ವಿರುದ್ಧ ಹಾಗೂ ಕಾನೂನು ಬಾಹಿರವಾಗಿ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಕ್ರಮಗಳ ವಿರುದ್ಧ ಖಂಡನಾರ್ಹವಾಗಿ ಅರಣ್ಯ ಇಲಾಖೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ಪ್ರತಿಭಟನೆಗೆ ಕಾರಣವಾಗಿದೆ ಎಂದು ತಿಳಿಸಿದರು.