ಕಾರವಾರ: ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಸೇಲಿಂಗ್ ಚಾಂಪಿಯನ್ ಶಿಪ್‍ಗಳಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ದೇಶದ ವಿವಿಧ ರಾಜ್ಯಗಳ ಒಟ್ಟೂ 25 ಹಾಯಿದೋಣಿ ಸ್ಪರ್ಧಾಳುಗಳಿಗೆ ಕಾರವಾರದ ಕಡಲ ತೀರಗಳಲ್ಲಿ ತರಬೇತಿ ನೀಡಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಹಾಯಿದೋಣಿ ಸ್ಪರ್ಧಾಳುಗಳು ಕಳೆದ 2 ತಿಂಗಳಿನಿಂದ ಕಾರವಾರದಲ್ಲಿ ನೆಲೆಸಿ, ತರಬೇತಿ ಪಡೆದುಕೊಂಡಿದ್ದಾರೆ. ಇಲ್ಲಿನ ಬೈತಖೋಲ್ ಬಂದರು ಸಮೀಪದಿಂದ ಮಾಜಾಳಿಯವರೆಗೆ ಆಳ ಸಮುದ್ರದಲ್ಲಿ ಹಾಯಿ ದೋಣಿ ಸಹಾಯದಲ್ಲಿ ಓಡಾಟ ನಡೆಸಿದ್ದಾರೆ.
ಈ ತಂಡದಲ್ಲಿ ವಿವಿಧ ರಾಜ್ಯಗಳಿಂದ ಆಯ್ಕೆಯಾದ 8 ರಿಂದ 18 ವರ್ಷದ ಕ್ರೀಡಾಪಟುಗಳಿದ್ದು, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಹಾಗೂ ಹ್ಯಾಚಿಂಗ್ ಅಸೋಸಿಯೇಶನ್ ಆಫ್ ಕರ್ನಾಟಕ ನೆರವಿನಲ್ಲಿ ಸೇಲಿಂಗ್ ತರಬೇತಿ ಪಡೆದಿದ್ದಾರೆ. ಇವರಿಗೆ ಅಂತಾರಾಷ್ಟ್ರೀಯ ತರಬೇತುದಾರ ಆಂಧ್ರದ ಶಿವು ಸೇಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕ್ರೀಡಾಪಟುಗಳಿಗೆ ಸೇಲಿಂಗ್‍ನ ವಿವಿಧ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ತಂಡದ ಎಲ್ಲ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದವರೇ ಆಗಿದ್ದರೂ ಸಹ ಸಮುದ್ರದ ಭಾರಿ ಗಾಳಿ, ಸುಳಿ ಗಾಳಿಗಳಲ್ಲಿ ಬೋಟ್ ನಡೆಸುವ ಅನುಭವ ಪಡೆಯುವ ಸಲುವಾಗಿ ಇಲ್ಲಿ ಭಾಗವಹಿಸಿದ್ದಾರೆ. ಕಾರವಾರದ ಸುಂದರ ವಾತಾವರಣದಲ್ಲಿ ಸೇಲಿಂಗ್ ಮಟ್ಟುಗಳನ್ನು ಕಲಿಯಲು ಸಂತಸವಾಗುತ್ತದೆ ಎಂಬುದು ಯುವ ಸೇಲರ್‍ಗಳ ಅಭಿಪ್ರಾಯವಾಗಿದೆ.
ಪ್ರಕಾಶ ಹರಿಕಂತ್ರ (ಜೆತ್ನಾ ಕೇಂದ್ರದ ಮ್ಯಾನೇಜರ್):
ಕಾರವಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ತರಬೇತಿಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಹಿಂದೆಯೂ ಸಹ ಜೇತ್ನಾ ವತಿಯಿಂದ ಹಲವು ತರಬೇತಿಗಳನ್ನು ನಡೆಸಲಾಗಿತ್ತು.
ಶಿವ ಟಿ. (ತರಬೇತುದಾರ):
ಕಾರವಾರದ ಸುಂದರ ವಾತಾವರಣದಲ್ಲಿನ ಕಡಲಿನಲ್ಲಿ ಸೇಲಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಂತಸವಾಗುತ್ತದೆ. ಜೆತ್ನಾ ಕೇಂದ್ರದ ಮ್ಯಾನೇಜರ್ ಪ್ರಕಾಶ ಹರಿಕಂತ್ರ ಸೇರಿದಂತೆ ಇಲ್ಲಿನ ಜಿಲ್ಲಾಧಿಕಾರಿಗಳೂ ಸಹ ಉತ್ತಮ ಸಹಕಾರ ನೀಡಿದ್ದಾರೆ.