ಶಿರಸಿ: ಗರ್ಭಗುಡಿಯಲ್ಲಿ ದೇವರ ಪ್ರತಿಷ್ಠಾಪನೆ ಆದಂತೆ ಪ್ರತಿ ವ್ಯಕ್ತಿ ದೇಹದ ಗರ್ಭಗುಡಿಯಾದ ಹೃದಯದಲ್ಲಿ ದೇವರನ್ನು ಪ್ರತಿಷ್ಠಾಪಿಸಿಕೊಳ್ಳಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಬರೂರು ಲಕ್ಷ್ಮೀನರಸಿಂಹ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಶನಿವಾರ ಶಿಖರ ಕಳಶ ಪ್ರತಿಷ್ಠೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ದೇವಾಲಯಕ್ಕೂ, ವ್ಯಕ್ತಿಯ ದೇಹಕ್ಕೂ ಸಾಮ್ಯತೆ ಇದೆ. ಒಬ್ಬ ಮನುಷ್ಯ ಶಾಂತಚಿತ್ತತೆಯಲ್ಲಿ ಕುಳಿತಿರುವ ಸ್ಥಿತಿ ಹೇಗುರುತ್ತದೆಯೋ, ದೇವಾಲಯವೂ ಹಾಗಿರುತ್ತದೆ. ನೆಲಕ್ಕೆ ಕೂತಾಗ ಇರುವ ಶರೀರದ ವಿನ್ಯಾಸದ ರೀತಿ ಗರ್ಭ ಗುಡಿ ಇರುತ್ತದೆ. ಧ್ವಜ ಸ್ತಂಬ ದೇವರ ಪಾದದ ಪ್ರತೀಕ. ಮೂಲಧಾರದಿಂದ ಆರಂಭಿಸಿ ಬ್ರಹ್ಮರಂದ್ರದ ವರೆಗೆ ಗರ್ಭಗುಡಿಯಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಅದು ಕ್ಷಣಾಧಾರದ ಸ್ಥಾಪನೆ. ನಮ್ಮೊಳಗೂ ದೇವರ ಸ್ಥಾಪನೆ ಮಾಡಬೇಕು, ಮೊದಲು ದೇವರ ಗುಡಿಯಲ್ಲಿ ಅವನ ಸ್ಥಾಪನೆ, ಉಪಾಸನೆ, ನಂತರ ಶರೀರದ ಒಳಗೆ ಉಪಾಸಣೆ, ಸ್ಥಾಪನೆ ಆಗಬೇಕು ಎಂದರು.
ಹಿರಣ್ಯ ಕಶ್ಯಪನನ್ನು ನಾಶಮಾಡಲು ಭಗವಂತ ರೌದ್ರಾವತಾರ ತಾಳಿದ್ದ. ಆ ಬಳಿಕ ಪ್ರಹಲ್ಲಾದನನ್ನು ಅಷ್ಟೇ ಸೌಮ್ಯತೆಯಿಂದ ಎತ್ತಿ ಪ್ರೀತಿ ತೋರಿದ್ದಾನೆ. ಭಗವಂತನ ಸಾನ್ನಿಧ್ಯವೇ ಅದಮ್ಯವಾದುದು. ಲಕ್ಷ್ಮೀ ನರಸಿಂಹನ ಅನೇಕ ದೇವಸ್ಥಾನಗಳಿದ್ದರೂ, ಶೀಲಾಮಯ ದೇವಸ್ಥಾನ ಬಹಳ ಕಡಿಮೆಯಿದೆ. ಇಲ್ಲಿ ಯೋಗ ನರಸಿಂಹ ಇದೆ. ಅದು ಗ್ರಾಮಸ್ಥರ ಯೋಗ. ಹೃದಯದಲ್ಲಿ ಲಕ್ಷ್ಮೀ ಆವಾಸವಿದೆ. ಭಕ್ತರಹತ್ತಿರ ಬರುವಲ್ಲಿ ಭಗವಂತನಿಗೆ ಯಾವುದೇ ಅಡೆತಡೆಗಳಿಲ್ಲ. ಹೀಗಾಗಿ, ಬರೂರು ಎಲ್ಲರೂ ಬರುವ ಊರಾಗಿದೆ ಎಂದರು.
ದೇವಾಲಯದ ಗೌರವಾಧ್ಯಕ್ಷರೂ ಆಗಿರುವ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇವಸ್ಥಾನದ ಶಕ್ತಿಯನ್ನು ದೇವಾಲಯ ತೋರಿಸಿದೆ. ೧.೫ ಕೋಟಿ ರೂ. ಮೊತ್ತದಲ್ಲಿ ಕೇವಲ ೯ ತಿಂಗಳಲ್ಲಿ ಮಾಡಿರುವುದು ದೇವರ ಆಶೀರ್ವಾದವನ್ನು ತೋರಿಸುತ್ತಿದೆ ಎಂದರು.
ವೇದಮೂರ್ತಿ ಮಂಜುಗುಣಿ ಶ್ರೀನಿವಾಸ ಭಟ್, ವಿ. ಗಣಪತಿ ಭಟ್ ಕಿಬ್ಬಳ್ಳಿ, ವಿ. ಕುಮಾರ ಭಟ್ ಕೊಳಗಿಬೀಸ್ ಪ್ರಧಾನ ಆಚಾರ್ಯತ್ವ ವಹಿಸಿದ್ದರು.
ಕ್ರೇನ್ ಮೂಲಕ ತೆರಳಿದ ಸ್ವಾಮೀಜಿ:
ದೇವಾಲಯದ ಶಿಖರ ಕಳಶ ಪ್ರತಿಷ್ಠೆಗೆ ತೆರಳುವ ಸಲುವಾಗಿ ಸ್ವಾಮೀಜಿಯವರಿಗೆ ಕ್ರೇನ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಭಕ್ತರ ಸಮ್ಮುಖದಲ್ಲಿ ಕ್ರೇನ್ ಮೂಲಕ ಏರಿದ ಸ್ವಾಮೀಜಿ ಕಳಶ ಪ್ರತಿಷ್ಠೆ ನೆರವೇರಿಸಿದರು.