ಕಾರವಾರ: ಗಣೇಶನ ಹುಟ್ಟಿದ ದಿನವೆಂದು ನಂಬಲಾಗುವ ಮಾಘ ಚತುರ್ಥಿಯ ದಿನದಂದು ತಾಲೂಕಿನ ವಿವಿಧ ಸಾರ್ವಜನಿಕ ಪ್ರದೇಶ ಸೇರಿದಂತೆ ಹಲವರ ಮನೆಗಳಲ್ಲಿ ಹರಕೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಶುಕ್ರವಾರ ತಾಲೂಕಿನಲ್ಲೆಡೆ ಹಬ್ಬದ ವಾತಾವರಣ ಆವರಿಸಿಕೊಂಡಿತ್ತು. ಸಾಮಾನ್ಯವಾಗಿ ಆಗಸ್ಟ್’ನ ಗಣೇಶ ಚತುರ್ಥಿ ಸಂದರ್ಭದಲ್ಲಿ ನಾನಾ ಕಾರಣಗಳಿಂದ ಹಬ್ಬ ಆಚರಿಸಲು ಸಾಧ್ಯವಾಗದವರು ಈ ಮಾಘ ಚೌತಿಯಂದು ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜಿಸುವುದು ವಾಡಿಕೆ. ಗಣೇಶ ಮೂರ್ತಿಪ್ರತಿಷ್ಠಾಪನೆ ಮಾಡುವ ಮನೆಗಳಲ್ಲಿ ತಳಿರು, ತೋರಣ, ವಿದ್ಯುತ್ ದೀಪಗಳನ್ನು ಹಾಕಿ ಅಲಂಕರಿಸಲಾಗಿತ್ತು. ಮನೆ ಮಂದಿಯೆಲ್ಲ ಬೆಳಿಗ್ಗೆ ಗಣೇಶನನ್ನು ಬರಮಾಡಿಕೊಂಡು ವಿಜೃಂಭಣೆಯಿಂದ ಗಣೇಶನಿಗೆ ಪೂಜೆ ಸಲ್ಲಿಸಿದರು. ಅದರಲ್ಲೂ ವಿಶೇಷವಾಗಿ ಹರಕೆ ಹೊತ್ತವರು ಈ ದಿನ ವಿಘ್ನ ನಿವಾರಕನನ್ನು ಪ್ರತಿಷ್ಠಾಪಿಸಿ, ಹರಕೆ ತೀರಿಸಿದರು.
ಸಾಮಾನ್ಯವಾಗಿ ವೈಯಕ್ತಿಕ, ಕೌಟುಂಬಿಕ ಸಮಸ್ಯೆಗಳ ನಿವಾರಣೆಗೆ ಹರಕೆ ಹೊತ್ತು ಗಣಪತಿಯನ್ನು ಈ ಮಾಘ ಚೌತಿಯಂದು ಅನೇಕರು ಪ್ರತಿಷ್ಠಾಪಿಸುತ್ತಾರೆ. ಆದರೆ ತಾಲೂಕಿನ ಹಳೆಕೋಟದಲ್ಲಿ ಈ ಬಾರಿ ಕೋವಿಡ್‍ನಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ರಂಗಭೂಮಿ ಕಲಾವಿದರ ಸಮಸ್ಯೆ ಪರಿಹಾರಕ್ಕಾಗಿ ಸಾರ್ವಜನಿಕವಾಗಿ ಹರಕೆ ಗಣಪತಿಯನ್ನುಪ್ರತಿಷ್ಠಾಪಿಸಲಾಗಿದೆ. ಇದರಲ್ಲಿ ಮತ್ತೊಂದು ವಿಶೇಷವೆಂದರೆ, ನಾಟಕಕಾರ ಗಜಾನನ ಕಲ್ಗುಟ್ಕರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ ಸ್ವತಃ ಗಜಾನನ ಅವರೇ ಲಂಬೋದರನ ಮೂರ್ತಿಯನ್ನು ನಿರ್ಮಿಸಿ, ಪ್ರತಿಷ್ಠಾಪಿಸಿ ವೈದಿಕರಿಂದ ಪೂಜೆ ಸಲ್ಲಿಸಿದ್ದಾರೆ.
ಕಲಾವಿದರಾದ ಸುನೀಲ ಹಣಕೋಣ ಮತ್ತವರ ಸ್ನೇಹಿತರು ಮಧ್ಯಾಹ್ನದ ಅನ್ನಸಂತರ್ಪಣೆ ಕಾರ್ಯಕ್ರಮ ಸೇರಿದಂತೆ ಇನ್ನಿತರ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಸಾಯಂಕಾಲ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಕೊಂಕಣಿ ನಾಟಕ ಪ್ರದರ್ಶನ ನಡೆಯಿತು. ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಯನ್ನು ಒಂದೇ ದಿನಕ್ಕೆ ವಿಸರ್ಜಿಸಿದರೆ, ಸಾರ್ವಜನಿಕ ಗಣೇಶನನ್ನು ಎರಡನೇ ದಿನ ಮಧ್ಯಾಹ್ನ ಮಹಾಪೂಜೆ ನಡೆಸಿ, ವಿಸರ್ಜಿಸಲಾಗುತ್ತದೆ. ಶನಿವಾರ ಸಂಜೆ ಇಲ್ಲಿನ ಗಣಪತಿಯ ವಿಸರ್ಜನೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಗಜಾನನ ಕಲ್ಗುಟ್ಕರ್ (ಮೂರ್ತಿ ತಯಾರಕ ಮತ್ತು ಕಲಾವಿದ):
ನಾಲ್ಕು ವರ್ಷಗಳಿಂದ ಸ್ನೇಹಿತರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸಾರ್ವಜನಿಕವಾಗಿ ಹರಕೆ ಗಣಪತಿ ಸ್ಥಾಪಿಸಿ, ಪೂಜೆ ಸಲ್ಲಿಸುತ್ತಿದ್ದೇವೆ. ಈ ಬಾರಿ ಸ್ವತಃ ನಾನೇ ಏಳು ಅಡಿ ಎತ್ತರದ ಮೂರ್ತಿ ತಯಾರಿಸಿದ್ದು, ಕೋವಿಡ್‍ನಿಂದ ಕಲಾವಿದರಿಗೆ ಬಂದಿರುವ ವಿಘ್ನಗಳು ನಿವಾರಣೆಯಾಗಲಿ ಎನ್ನುವ ಸಂಕಲ್ಪದೊಂದಿಗೆ ಪೂಜೆ ಸಲ್ಲಿಸಲಾಗಿದೆ.
ಸುಬ್ರಹ್ಮಣ್ಯ ಭಟ್ಟ ( ಅರ್ಚಕರು):
ಮಾಘ ಚತುರ್ಥಿಯ ಗಣೇಶ ಜಯಂತಿಯಂದು ಗಣೇಶನ್ನು ಪ್ರತಿಷ್ಠಾಪಿಸಿ, ಪೂಜಿಸಿದರೆ ಸರ್ವಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ವಿವಾಹ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಇದರಿಂದ ಪರಿಹಾರ ದೊರೆಯಲಿದೆ.