ಸಿದ್ದಾಪುರ: ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯ ಕಲೆ. ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಪರಿಚಯಿಸುವ ಯಕ್ಷಗಾನ ಕಥಾನಕಗಳು ನಮ್ಮ ಸಂಸ್ಕೃತಿ ಹಾಗೂ ವೈವಿಧ್ಯತೆಯನ್ನು ಬಿಂಬಿಸುತ್ತದೆ ಎಂದು ಶಿರಸಿ ನಗರ ಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.
ತಾಲೂಕಿನ ಮುಠ್ಠಳ್ಳಿ ಸಮೀಪದ ಹಳಿಯಾಳದ ಸಿಂಗಾರಪ್ರಿಯ ನಾಗಚೌಡೇಶ್ವರಿ ದೇವಾಲಯದಲ್ಲಿ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಸಿಂಗಾರಪ್ರಿಯ ನಾಗಚೌಡೇಶ್ವರಿ ಮಹಾತ್ಮೆ ಯಕ್ಷಗಾನ ಕೃತಿ ಬಿಡುಗಡೆ ಮಾಡಿ ಅವರು ಗುರುವಾರ ಮಾತನಾಡಿದರು.
ಕೃತಿಕಾರ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್ ಮಾತನಾಡಿ ಯಾವುದೇ ಯಕ್ಷಗಾನ ಪ್ರಸಂಗವನ್ನು ರಚಿಸುವಾಗ ಮುಖ್ಯವಾಗಿ ಸಾಹಿತ್ಯವನ್ನು ತಿಳಿದುಕೊಳ್ಳಬೇಕು. ನಮ್ಮ ಮಕ್ಕಳಿಗೆ ಯಾವುದೇ ಸಂಪತ್ತನ್ನು ಮಾಡಿಡುವುದಕ್ಕಿಂತ ಜ್ಞಾನ ಸಂಪತನ್ನು ನೀಡುವ ಕೆಲಸವನ್ನು ಪಾಲಕರು ಮಾಡಬೇಕು ಹಾಗೂ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸಬೇಕೆಂದರು.
ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ್ ಅಧ್ಯಕ್ಷತೆವಹಿಸಿದ್ದರು. ಸುಬ್ರಾಯ ಹೆಗಡೆ ಶಿರಸಿ, ತಾಪಂ ಮಾಜಿ ಅಧ್ಯಕ್ಷ ಸುಧೀರ್ ಬಿ.ಗೌಡರ್ ಹೆಗ್ಗೋಡಮನೆ, ದೇವಸ್ಥಾನದ ಧರ್ಮದರ್ಶಿ ಅಶೋಕ ನಾಯ್ಕ ಹಳಿಯಾಳ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಬೇಡ್ಕಣಿ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ವ್ಯವಸ್ಥಾಪಕ ಲಕ್ಷ್ಮಣ ನಾಯ್ಕ ಬೇಡ್ಕಣಿ,ಹಳಿಯಾಳ ಮಹಿಷಾಸುರ ಮರ್ಧಿನಿ ದೇವಾಲಯದ ಅರ್ಚಕ ಎಂ.ಬಿ.ನಾಯ್ಕ ಹಳಿಯಾಳ ಉಪಸ್ಥಿತರಿದ್ದರು.
ಅರ್ಚನಾ ನಾಯ್ಕ ತೆಂಗಿನಮನೆ ಕಾರ್ಯಕ್ರಮ ನಿರ್ವಹಿಸಿದರು.ನಂತರ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ ಹಾಗೂ ಅತಿಥಿ ಕಲಾವಿದರಿಂದ ಶ್ರೀ ಸಿಂಗಾರಪ್ರಿಯ ನಾಗಚೌಡೇಶ್ವರಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.