ಮೈಸೂರು: ಹಿಜಬ್ ಹಾಕಿಕೊಂಡೇ ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿದಿರುವವರ ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಿಡಿಕಾರಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಎಲ್ಲರೂ ಉದ್ಯೋಗಕ್ಕಾಗಿ ಕಾಲೇಜಿಗೆ ಬರುತ್ತಾರೆ ಆದರೆ ಇವರು ಹಿಜಬ್‌ಗಾಗಿ ಕಾಲೇಜಿಗೆ ಬರುತ್ತೇವೆ ಅಂತಿದ್ದಾರೆ. ಇವರು ಹೋಗ ಬೇಕಾಗಿರುವುದು ಮದರಸಾಕ್ಕೆ ಹೊರತು ಕಾಲೇಜಿಗಲ್ಲ. ಮದರಸಾಕ್ಕೆ ಇವರು ಹಿಜಬ್ ಆದರೂ ಹಾಕಿಕೊಳ್ಳಲಿ ಅಥವಾ ಬುರ್ಖಾ ಆದರೂ ಹಾಕಿಕೊಳ್ಳಲಿ, ಟೋಪಿ ಆದರೆ ಹಾಕಿಕೊಂಡು ಹೋಗಲಿ, ಅಲ್ಲಿಯೇ ಕಲಿಯಲಿ” ಎಂದಿದ್ದಾರೆ.
ಶಿಕ್ಷಣ ವ್ಯವಸ್ಥೆ ನೀತಿ ನಿಯಮಾವಳಿಗಳ ಆಧಾರದ ಮೇಲೆ ನಡೀತಾ ಇದೆ. ಸರ್ಕಾರಿ ಅಥವಾ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಇದೆ, ಅದನ್ನು ಅನುಸರಿಸಲೇ ಬೇಕು. ಮನಸೋ ಇಚ್ಛೆ ನಡೆದುಕೊಳ್ಳಬೇಕೆಂದರೆ ಅದಕ್ಕೆ ಮದರಸ ಇದೆ. ನಮಗೆ ಷರಿಯಾನೇ ಬೇಕು, ನಮಗೆ ಧರ್ಮವೇ ಮುಖ್ಯ ಅನ್ನೋರಿಗೆ 1947ರಲ್ಲಿ ಪ್ರತ್ಯೇಕ ದೇಶವನ್ನು ನೀಡಲಾಗಿದೆ ಅಲ್ಲಿಗೆಯೇ ಹೋಗಬಹುದಿತ್ತು. ಇಲ್ಲಿಯೇ ಉಳಿದುಕೊಂಡಿದ್ದಾರೆ ಅಂದ ಮೇಲೆ ಈ ದೇಶದ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿತ್ತು” ಎಂದಿದ್ದಾರೆ.
“ಕೆಲವರು ಗಣೇಶೋತ್ಸವ ಆಚರಣೆ, ಶಾರದಾ ಪೂಜೆ ಬಗ್ಗೆ, ಬಳೆ, ಕುಂಕುಮ ಹಾಕುವ ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ನಾನು ಹೇಳಲು ಬಯಸುವುದೇನೆಂದರೆ ಇದು ಬ್ರಿಟಿಷರ ಇಂಡಿಯಾ ಅಲ್ಲ, ಇದು ಭಾರತ. ಈ ನೆಲದ ಬುನಾದಿಯೇ ಹಿಂದೂ ಧರ್ಮ. ಮೆಕ್ಕಾ, ಮದೀನಾ ಅಥವಾ ಜೆರುಸಲೇಂ ಅಲ್ಲಿ ನಮಗೆ ಶಾರದಾ ಪೂಜೆ ಮಾಡಲು ಅವಕಾಶ ಕೊಡಿ ಎಂದು ನಾವು ಕೇಳುತ್ತಿಲ್ಲ. ಈ ದೇಶದ ನೆಲ, ಜಲ, ಸಂಸ್ಕೃತಿಯ ಪ್ರತೀಕವಾಗಿರುವುದನ್ನು ನಾವು ಆಚರಿಸುತ್ತೇವೆ” ಎಂದಿದ್ದಾರೆ.