ಶಿರಸಿ :ತಾಲೂಕಿನ ಬರೂರು ಗ್ರಾಮದ ಲಕ್ಷ್ಮೀ ನರಸಿಂಹ ದೇವರ ಪುನರ್ ಪ್ರತಿಷ್ಠೆ ಕಾರ್ಯಕ್ರಮ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನದ ಅಂಗವಾಗಿ 16 ವೈದಿಕರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಶುಕ್ರವಾರದಿಂದ 4 ದಿನಗಳ ಕಾಲ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಮೊದಲ ದಿವಸ ನೂತನ ವಿಗ್ರಹದ ಮೆರವಣಿಗೆ ನಡೆಯಿತು. ಬರೂರು ಬಸ್ ನಿಲ್ದಾಣದಿಂದ ದೇವಸ್ಥಾನದವರೆಗೆ ಡೊಳ್ಳು ಕುಣಿತ ಹಾಗೂ ಮಹಿಳೆಯರ ಪೂರ್ಣಕುಂಭ ಗೌರವದೊಂದಿಗೆ ಲಕ್ಷ್ಮೀ ನರಸಿಂಹ ವಿಗ್ರಹದ ಮೆರವಣಿಗೆ ನಡೆಸಲಾಯಿತು.
ನಂತರ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಲಾದ ಯಾಗ ಶಾಲೆಯಲ್ಲಿ ಕಲಶ ಪ್ರತಿಷ್ಠಾಪನೆ ಹಾಗೂ ವಿಗ್ರಹ ಪ್ರತಿಷ್ಠಾಪನೆಯ ಪೂರ್ವ ತಯಾರಿಯ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಕುಮಾರ್ ಭಟ್, ಗಣಪತಿ ಭಟ್ ಕಿಬ್ಬಳ್ಳಿ ಸೇರಿದಂತೆ ಒಟ್ಟು ೧೬ ವೈದಿಕರು ಧಾರ್ಮಿಕ ವಿಧಾನಗಳನ್ನು ನಡೆಸಿಕೊಟ್ಟರು.
ಶನಿವಾರ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಜಿಗಳು ಭಾಗವಹಿಸಲಿದ್ದು, ತಮ್ಮ ಅಮೃತ ಹಸ್ತದಿಂದ ಕಲಶ ಪ್ರತಿಷ್ಠಾಪನೆಯನ್ನು ಮಾಡಲಿದ್ದಾರೆ. ಇದೇ ವೇಳೆ ಗುರುಗಳಿಗೆ ಮಹಿಳೆಯವರ ಪೂರ್ಣಕುಂಭ ಸ್ವಾಗತ ಸಹ ಹಮ್ಮಿಕೊಳ್ಳಲಾಗಿದೆ.