ಕಾರವಾರ: ತಾಲೂಕಿನ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯ ಕನಸಗೇರಿಯಲ್ಲಿರುವ ಸಯ್ಯದ್ ಮಾಲ್ದಾರ್ ನೂರ್ ದರ್ಗಾವನ್ನು ದುಷ್ಕರ್ಮಿಗಳು ಕೆಡವಿದ್ದಾರೆ. ಕಣಸಗಿರಿಯಲ್ಲಿ ಕಳೆದ ಹಲವು ವರ್ಷಗಳಿಂದ ಇರುವ ಸೈಯದ್ ನೂರ್ ದರ್ಗಾವನ್ನು ಕೆಲ ಅಜ್ಞಾತರು ಹಾಳುಗೆಡವಿದ್ದಾರೆ.
ಕನಸಗಿರಿಯಲ್ಲಿ ಮುಸ್ಲಿಂ ಧರ್ಮದ ಒಂದೇ ಒಂದು ಕುಟುಂಬ ಕೂಡ ನೆಲೆಸಿದ್ದಿಲ್ಲ. ಅಲ್ಲದೇ ಈ ದರ್ಗಾ ಹಿಂದೂ ಧರ್ಮದ ಒಂದು ಕುಟುಂಬಕ್ಕೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದೆನ್ನಲಾಗಿದೆ. ಕಣಸಗಿರಿಯ ಆನಂದು ರಾಣೆ ಎಂಬುವವರ ಕುಟುಂಬಕ್ಕೆ ಸೇರಿದ ಜಾಗದಲ್ಲಿ ಚಿತ್ತಾಕುಲಾ ಮಾರುಕಟ್ಟೆ ಭಾಗದ ಕೆಲ ಮುಸ್ಲಿಂ ಧರ್ಮಿಯರು ಕಳೆದ ಸುಮಾರು 20 ವರ್ಷಗಳ ಹಿಂದೆ ದರ್ಗಾ ನಿರ್ಮಿಸಿದ್ದರೆನ್ನಲಾಗಿದೆ.
ಆದರೆ ಈ ವರೆಗೂ ಆ ಜಾಗ ಆನಂದು ರಾಣೆ ಕುಟುಂಬಕ್ಕೆ ಸೇರಿದ್ದಿದೆ. ದರ್ಗಾದ ಒಳಭಾಗ ಹಾಗೂ ಕಂಪೌಂಡ್‌ಗಳನ್ನು ಒಡೆದಿದ್ದು ಈ ವಿಚಾರವಾಗಿ ಯಾವುದೇ ಕೋಮು ಗಲಭೆ ಸೃಷ್ಟಿಯಾಗ ಬಾರದ೦ಬ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಂಡಿದ್ದಾರೆ. ಫೆ.1ರಂದು ಹಾರೂನ್ ಶೇಖ್ ಎಂಬವರು ಸಯ್ಯದ್ ಮಾಲ್ದಾರ್ ನೂರ್ ದರ್ಗಾಕ್ಕೆ ಬಂದು ಸ್ವಚ್ಛತೆಯ ಕೆಲಸ ಮಾಡಿ ತೆರಳಿದ್ದರು. ಆ ನಂತರ ಯಾರೂ ಕೂಡ ಈ ದರ್ಗಾಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಬುಧವಾರ ಸಂಜೆಯ ಬಳಿಕ ಯಾರೋ ಕೃತ್ಯ ಎಸಗಿರುವ ಬಗ್ಗೆ ಶಂಕಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಭೇಟಿ ನೀಡಿ ಪರಿಶೀಲಿಸಿದರು. ಹಾಗೂ ಯಾವುದೇ ರೀತಿಯ ಕೋಮು ಗಲಭೆಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಲು ಚಿತ್ತಾಕುಲ ಪೊಲೀಸ್ ಠಾಣಾ ಅಧಿಕಾರಿಗೆ ತಿಳಿಸಿದ್ದಾರೆ.
ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ತನಿಖೆಯ ಮೊದಲ ಹಂತವಾಗಿ ಸ್ಥಳೀಯ ಕೆಲವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
20 ವರ್ಷಗಳ ಹಿಂದೆ ನಿರ್ಮಾಣ:
ಕಣಸಗಿರಿಯಲ್ಲಿರುವ ಸೈಯದ್ ಮಾಲ್ದಾರ ನೂರ್ ದರ್ಗಾ 20 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಇದನ್ನು ಬಯಲು ಸೀಮೆ ಕಡೆಯಿಂದ ವ್ಯಾಪಾರ ವಹಿವಾಟುಗಳಿಗಾಗಿ ಬಂದ ಕೆಲವರು ನಿರ್ಮಾಣ ಮಾಡಿದ್ದರು. ಆನಂತರ ಈ ದರ್ಗಾ ಹಾಗೆಯೇ ಬಿಟ್ಟು ಅಲ್ಲಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ದರ್ಗಾ ನಿರ್ಮಿಸಲಾಗಿದೆ. ಅಲ್ಲದೇ ಈ ದರ್ಗಾಕ್ಕೆ ಕೆಲ ವರ್ಷಗಳ ಕಾಲ ವಾರ್ಷಿಕ ಆಚರಣೆಯನ್ನು ಕೈ ಬಿಟ್ಟಿರುವ ಬಗ್ಗೆ ಸ್ಥಳೀಯರು ಹೇಳುತ್ತಾರೆ. ಆದರೆ ಇತ್ತಿಚೆಗಷ್ಟೇ ಚಿತ್ತಾಕುಲಾ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಹಣ್ಣು ವ್ಯಾಪಾರ ಮಾಡುವ ಒಂದು ಕುಟುಂಬದವರು ಬಂದು ಸ್ವಚ್ಛಗೊಳಿಸುತ್ತಿದ್ದಾರೆನ್ನಲಾಗಿದೆ.