ಶಿರಸಿ: ಸರ್ಕಾರಿ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವನನ್ನು ಶಿವಮೊಗ್ಗಕ್ಕೆ ಕರೆದುಹೋಗಿ ನಗ್ನಗೊಳಿಸಿ ಫೋಟೋ-ವಿಡಿಯೋ ಮಾಡಿ ₹15,00,000 ಕೊಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಹಿನ್ನಲೆಯಲ್ಲಿ ಮೂವರನ್ನು ಶಿರಸಿ ಪೋಲೀಸರು ಗುರುವಾರ ಬಂಧಿಸಿದ್ದಾರೆ.
ಶಿರಸಿಯ ಅಜಿತ್ ನಾಡಿಗ (25), ಧನುಶ್ಯ ಕುಮಾರ ಶೆಟ್ಟಿ (25) , ಶಿವಮೊಗ್ಗದ ಪದ್ಮಜಾ ಡಿ (50) ಎನ್ನುವವರೇ ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲ್ ಮಾಡಿದ ಆರೋಪಿಗಳಾಗಿದ್ದಾರೆ.
ಆರೋಪಿಗಳು ಫಿರ್ಯಾದಿಯವರ ತಂದೆಯ ಬಳಿ ಹೋಗಿ ನಿಮ್ಮ ಮಗ ಮಹಿಳೆಯ ಜೊತೆ ಇರುವ ಕೆಲವು ನಗ್ನ ಫೋಟೋಗಳು ಮತ್ತು ವಿಡಿಯೋಗಳಿವೆ. ಅವುಗಳನ್ನು ಡಿಲಿಟ್ ಮಾಡಲು ಹಾಗೂ ನಿಮ್ಮ ಮಗ ಜೀವಂತವಾಗಿ ಬರಲು 15,00,000 ರೂಪಾಯಿ ಕೊಡಬೇಕೆಂದು ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಎಸ್ಪಿ ಸುಮನ್ ಪೆನ್ನೆಕರ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ನೇಮಕಗೊಂಡ ವಿಶೇಷ ತಂಡವು ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಅಜಿತ್ ನಾಡಿಗ ಶಿರಸಿ ತಾಲೂಕಿನ ಉಂಚಳ್ಳಿ ನಿವಾಸಿಯಾಗಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ವಿವಿಧ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಭಾಷಣಕಾರನಾಗಿ ಹೋಗುತ್ತಿದ್ದು, ಸ್ವಾಮಿ ವಿವೇಕಾನಂದರ ಚಿಂತನೆಗಳ ಕುರಿತಾಗಿ ಭಾಷಣ ಮಾಡುತ್ತಿದ್ದನು. ಆದರೆ ಅಂತಹ ಭಾಷಣ ಮಾಡುವ ವ್ಯಕ್ತಿ ಹನಿ ಟ್ರ್ಯಾಪ್ ಮೂಲಕ ಬ್ಲ್ಯಾಕ್ ಮಾಡಿ ಹಣ ಮಾಡುವ ಹೀನ ಕೆಲಸಕ್ಕೆ ಮುಂದಾಗಿರುವುದು ನಾಚಿಕೇಡಿನ ವಿಷಯ ಎಂಬುದು ಸಾರ್ವಜನಿಕರ ಮಾತಾಗಿದೆ. ಈತನಿಗೆ ಯಾವುದೇ ಹಿಂದೂ ಸಂಘಟನೆಗಳಲ್ಲಿ ಅಥವಾ ವಿದ್ಯಾರ್ಥಿ ಪರಿಷತ್ ನಲ್ಲಿ ಯಾವುದೇ ಜವಾಬ್ದಾರಿ ಇಲ್ಲವಾಗಿತ್ತು. ಕೇವಲ ಸಾರ್ವಜನಿಕ ಕಾರ್ಯಕ್ರಮಕ್ಕೆ ಭಾಷಣಕಾರನಾಗಿ ಹೋಗುತ್ತಿದ್ದ ಎಂದು ತಿಳಿದುಬಂದಿದೆ.