ಯಲ್ಲಾಪುರ: ತಾಲೂಕಿನ ಸಾತೊಡ್ಡಿ ರಸ್ತೆಯ ದುರಸ್ತಿ, ಡಾಂಬರೀಕರಣ ಆಗುವವರೆಗೂ ಎಲ್ಲಾ ಚುಣಾವಣೆ ಬಹಿಷ್ಕರಿಸುವದಾಗಿ ಗ್ರಾಮಸ್ಥರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಎಚ್ಚರಿಸಿದ್ದಾರೆ.
ಈ ಕುರಿತು ಸಾತೊಡ್ಡಿ ವರೆಗಿನ ಕುಂಬ್ರಾಳ, ಕಟ್ಟಿಗೆ, ದೇಹಳ್ಳಿ ಇತರ ಗ್ರಾಮಗಳ ಒಟ್ಟು 150 ಕ್ಕೂ ಹೆಚ್ಚು ಜನ ಸಹಿ ಮಾಡಿದ ಪತ್ರವನ್ನು ಆಯೋಗಕ್ಕೆ ಕಳುಹಿಸಲಾಗಿದೆ.
ಕಟ್ಟಿಗೆ ಗ್ರಾಮವು ಯಲ್ಲಾಪುರದಿಂದ 15 ಕಿ.ಮೀ ಯಿಂದ 19 ಕಿ.ಮೀ ಕುಂಬ್ರಾಳದವರೆಗೂ ವಿಸ್ತೀರ್ಣ ಹೊಂದಿರುತ್ತದೆ. ಈ ಕಟ್ಟಿಗೆ ಊರಿನ ಜನ ಹಾಗೂ ಸುತ್ತಮುತ್ತಲಿನ ಶಿವಪುರ, ಕುಂಬ್ರಾಳ, ಸಾತೊಡ್ಡಿ, ದೇಹಳ್ಳಿ, ಕಂಚನಗದ್ದೆ ಊರುಗಳಿಂದ ಪ್ರತಿ ನಿತ್ಯದ ವ್ಯವಹಾರಗಳಿಗೆ, ಶಾಲಾ ಕಾಲೇಜುಗಳಿಗೆ, ದಿನ ನಿತ್ಯದ ಸಾಮಗ್ರಿಗಳಿಗೆ, ಆಸ್ಪತ್ರೆಗಳಿಗೆ, ಎಲ್ಲ ವ್ಯವಸ್ಥೆ ಕಾಗದ ಪತ್ರಗಳಿಗೆ ಯಲ್ಲಾಪುರಕ್ಕೆ ಹೋಗಬೇಕಾಗಿದೆ. ಈ ಊರಿನ ರಸ್ತೆ ಹತ್ತಾರು ವರ್ಷಗಳಿಂದ ತುಂಬಾ ಹದಗೆಟ್ಟಿದ್ದು ಇದು ಸಾರ್ವಜನಿಕರು ಸಂಚರಿಸಲು ಅಸಾಧ್ಯದ ಪರಿಸ್ಥಿತಿ ಎದುರಾಗಿದೆ.
ಕಳೆದ 8 ವರ್ಷಗಳಿಂದ ಈ ರಸ್ತೆಗೆ ಯಾವುದೇ ರಿಪೇರಿ ಕೆಲಸವಾಗಿರುವುದಿಲ್ಲ. ದೊಡ್ಡ-ದೊಡ್ಡ ಹೊಂಡಗಳು ಇರುವುದರಿಂದ ಅಪಘಾತ, ಅವಘಡಗಳು ಸಂಭವಿಸುತ್ತಿದೆ. ಗ್ರಾಮೀಣ ಜನರ ಸಂಚಾರಕ್ಕಲ್ಲದೇ, ಪ್ರವಾಸಿ ತಾಣಗಳಾದ ಸಾತೊಡ್ಡಿ ಫಾಲ್ಸ್, ತೂಗು ಸೇತುವೆ , ಹಾಗೂ ಉಳವಿಯಂತಹ, ಯಾತ್ರಾ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು , ಭಕ್ತಾಧಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ.
ರಸ್ತೆ ಹಾಳಾದ ಸ್ಥಿತಿಯಲ್ಲಿ ಇರುವುದರಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪಲು ಆಗುತ್ತಿಲ್ಲ. ರೋಗಿಗಳು, ವಯಸ್ಸಾದವರು, ಗರ್ಭಿಣಿಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದ ಕಾರಣ ನಮ್ಮವರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ರಸ್ತೆಗೆ ಪ್ರತಿ ವರ್ಷ ಮಣ್ಣು ಹಾಕುತ್ತಿರುವುದರಿಂದ ರಸ್ತೆಯ ಧೂಳು, ಹೊಂಡಗಳಿಂದ ಅಸ್ತಮಾ, ಸೊಂಟ ನೋವುಗಳಂತಹ ಕಾಯಿಲೆ ಕಾಣಿಸಿಕೊಳ್ಳುತ್ತಲಿವೆ.
ಹತ್ತಾರು ವರ್ಷಗಳಿಂದ ಇಲ್ಲಿಯ ಜನ, ಜನ ಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಕೂಡ ಕ್ರಮ ಕೈಗೊಳ್ಳದ ಕಾರಣ, ಕಟ್ಟಿಗೆ ಗ್ರಾಮದ ಸಮಸ್ತ ಮತದಾರರು ರಸ್ತೆ ಕುಂಬ್ರಾಳದವರೆಗೂ ಸಂಪೂರ್ಣ ಡಾಂಬರೀಕರಣವಾಗುವವರೆಗೂ ಮುಂದೆ ಬರುವ ಎಲ್ಲಾ ಚುಣಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಬೇಡಿಕೆಯು ನಾಗರಿಕ ಹಿತಾಸಕ್ತಿ ಕಾನೂನು ಅನುಕ್ರಮ 21ರ ಪ್ರಕಾರ ಮನವಿ ಇದಾಗಿರುತ್ತದೆ. ಈ ಮನವಿಗೂ ಯಾವುದೇ ಸ್ಪಂದನೆ ದೊರೆಯದಿದ್ದಲ್ಲಿ ಮುಂದಿನ ಕ್ರಮಕ್ಕಾಗಿ ನ್ಯಾಯಾಂಗದ ಮುಖೇನ ಹೋರಾಡುತ್ತೇವೆ ಎಂದು ಪತ್ರದಲ್ಲಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮಸ್ಥರಾದ ಸತೀಶ ಬಾಲಚಂದ್ರ ಗುಮ್ಮಾನಿ, ವಿಘ್ನೇಶ್ವರ ಕಟ್ಟೆಗದ್ದೆ, ಗಣೇಶ್ ಕಲ್ಪಾಲ, ಕೀರ್ತಿರಾಜ್ ಕೋಟೆಮನೆ, ಸರ್ವೇಶ್ವರ ಗುಮ್ಮಾನಿ, ಭಾಸ್ಕರ ಮೆಣಸುಮನೆ ಸೇರಿದಂತೆ 150 ಕ್ಕೂ ಹೆಚ್ಚು ಜನರು ಪತ್ರದಲ್ಲಿ ಸಹಿ ಮಾಡಿದ್ದಾರೆ.