ಕಾರವಾರ: ಸಾಕು ಪ್ರಾಣಿಗಳಲ್ಲಿ ವಿಶ್ವಾಸಿಕ ಪ್ರಾಣಿ ಶ್ವಾನ ಎನ್ನಲಾಗುತ್ತದೆ. ಆದರೆ ತಮ್ಮ ಮನೆಯಲ್ಲಿ ಸಾಕಿದ ಶ್ವಾನ ಹೊರತು ಪಡಿಸಿ ಬೀದಿಯಲ್ಲಿ ಓಡಾಡಿಕೊಂಡಿರುವ ಶ್ವಾನಗಳಿಗೆ ಅನ್ನ ಹಾಕಲು ಯಾರೊಬ್ಬರು ಮುಂದೆ ಬರುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ಬೀದಿ ನಾಯಿಗಳಿಗೆ ಅನ್ನ ಹಾಗುವ ಮೂಲಕ ಶ್ವಾನ ಪ್ರೇಮ ತೋರ್ಪಡಿಸುತ್ತಿದ್ದಾರೆ.
ಕಾರವಾರ ನಗರದ ಧೋಬಿಘಾಟ ರಸ್ತೆ ಪಕ್ಕದ ನಿವಾಸಿ ಮಹಿಳೆ ನಿರ್ಮಲಾ ಅಲ್ಫಾನ್ಸೊ ಕಳೆದ ಎರಡು ವರ್ಷಗಳಿಂದ ವಾರಕ್ಕೆ ಎರಡು ಸಲ ನಗರದ ಬೀದಿ ನಾಯಿಗಳಿಗೆ ಅನ್ನ ಹಾಕುತ್ತಿದ್ದಾರೆ. ಕೋರೊನಾ ಲಾಕ್ ಡೌನ್ ಸಂದರ್ಭದಲ್ಲಿ ಹೊಟೆಲ್ , ಅಂಗಡಿಗಳು, ಮೀನು ಮಾರುಕಟ್ಟೆ ಬಂದ್ ಇರುವುದರಿಂದ ಬೀದಿ ನಾಯಿಗಳಿಗೆ ಆಹಾರ ದೊರಕುತ್ತಿರಲಿಲ್ಲ. ಇದರಿಂದ ಅದೆಷ್ಟೋ ಬೀದಿ ನಾಯಿಗಳು ಹಸಿವಿನಿಂದ ಸಾವನ್ನಪ್ಪಿದ್ದವು. ಇನ್ನೂ ಕೆಲ ನಾಯಿಗಳು ಅಸ್ವಸ್ಥಗೊಂಡು ಸಾವಿನ ಅಂಚಿನಲ್ಲಿದ್ದವು.ಇದನ್ನು ಕಂಡ ನಿರ್ಮಲಾ ಅಲ್ಫಾನ್ಸೊ ವಾರಕ್ಕೆ ಎರಡು ಸಲ ತನ್ನ ಸ್ವಂತ ಖರ್ಚಿನಿಂದ ಅನ್ನ ಹಾಕುವ ಕಾಯಕ ಆರಂಭಿಸಿದ್ದರು. ಒಂದು ಸಲ ಸುಮಾರು 30 ಕೆಜಿ ಅಕ್ಕಿಯನ್ನು ಬೇಯಿಸಿ ಅದರಲ್ಲಿ ಕೋಳಿ ಮಾಂಸ ಬೆರೆಸಿ ನಗರದ ಮುಖ್ಯ ರಸ್ತೆಗಳಲ್ಲಿ, ಹೆದ್ದಾರಿ ಪಕ್ಕದ ಕಡಲ ತೀರದಲ್ಲಿ ಬೀದಿ ನಾಯಿಗಳಿಗೆ ತಿನ್ನಲು ಹಾಕುತ್ತಿದ್ದಾರೆ.
ನಿರ್ಮಲಾ ಅಲ್ಫಾನ್ಸೋ ಮೊದಲಿನಿಂದಲೂ ಪ್ರಾಣಿ ಪ್ರೀಯರಾಗಿದ್ದು, ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ದನಕರುಗಳಿಗೆ , ಬೀದಿನಾಯಿಗಳಿಗೆ ತನ್ನ ಮನೆ ಆವರಣದಲ್ಲಿ ತಂದು ಚಿಕಿತ್ಸೆ ನೀಡುವ ಕಾರ್ಯವೂ ಮಾಡುತ್ತಿದ್ದಾರೆ. ಅಲ್ಲದೇ ಬೀದಿ ನಾಯಿ ಮರಿಗಳನ್ನು ತಂದು ಆರೈಕೆ ಮಾಡಿ ತನ್ನ ಪರಿಚಯಸ್ಥರಿಗೆ ಸಾಕಲು ನೀಡುತ್ತಾರೆ. ಈಗಲೂ ಅವರ ಕಂಪೌಂಡ ಆವರಣದಲ್ಲಿ ಬೀದಿ ನಾಯಿ, ಆಕಳ ಕರುಗಳಿವೆ.
ಬೀದಿ ನಾಯಿಗಳೊಂದಿಗೆ ಅವರು ಎಷ್ಟು ಸ್ನೇಹ ಬೆಳೆಸಿಕೊಂಡಿದ್ದಾರೆಂದರೆ ಅವರ ಕಾರಿನ ಹಾರ್ನ್ ಶಬ್ದ ಕೇಳಿದ ಕೂಡಲೇ ನೂರಾರು ನಾಯಿಗಳು ಕಾರಿನತ್ತ ಓಡಿ ಬರುತ್ತವೆ. ಅಲ್ಲದೇ ಅವರೊಂದಿಗೆ ಸ್ನೇಹ ಪೂರಕವಾಗಿ ಕುಯಿ.. ಕುಯಿ ಶಬ್ದ ಮಾಡುತ್ತವೆ. ನಿರ್ಮಲಾ ಅಲ್ಫಾನ್ಸೊ ಅವರ ಶ್ವಾನ ಪ್ರೇಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಅಲ್ಫಾನ್ಸೋ:
ಮೂಖ ಪ್ರಾಣಿಗಳಿಗೆ ತಮಗಾಗುತ್ತಿರುವ ಕಷ್ಟ, ಸಂಕಟ ಹೇಳಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಅವುಗಳಿಗೆ ಅನ್ನ ನೀರು ಕೊಡುವುದು ಮನುಷ್ಯರಾಗಿರುವ ನಮ್ಮ ಧರ್ಮ. ಆದ್ದರಿಂದ ನಾನು ನನ್ನಿಂದಾಗುವಷ್ಟು ಸೇವೆ ಮಾಡುತ್ತಿದ್ದೇನೆ. ಇದರಲ್ಲಿ ನನಗೆ ನೆಮ್ಮದಿ ಹಾಗೂ ಆನಂದ ಸಿಗುತ್ತದೆ.