ಬೆಂಗಳೂರು: ಜೀವವೈವಿಧ್ಯ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಮುಖ್ಯಮಂತ್ರಿಗಳು ಬಜೆಟ್ ಪೂರ್ವ ಚರ್ಚೆ ಸಂದರ್ಭದಲ್ಲಿ ಪರಿಸರ, ಅರಣ್ಯ, ಜೀವವೈವಿಧ್ಯ ತಜ್ಞರು, ಸಂಘ ಸಂಸ್ಥೆಗಳ ಸಭೆ ಏರ್ಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯ ಬಜೆಟಿನಲ್ಲಿ ಪರಿಸರ ಪೂರಕ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಸೇರ್ಪಡೆ ಮಾಡಲು ಪರಿಸರ ತಜ್ಞರ ನಿಯೋಗ ಕಳೆದ ಡಿಸೆಂಬರನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿವರ ಪ್ರಸ್ತಾವನೆ ಸಲ್ಲಿಸಿತ್ತು. ಈ ಬಗ್ಗೆ ಮುಖ್ಯ ಮಂತ್ರಿ ಕಛೇರಿ ಅರಣ್ಯ ಪರಿಸರ ಇಲಾಖೆಗೆ ತಯಾರಿ ನಡಸಲು ಸೂಚನೆ ನೀಡಿತ್ತು. ಅರಣ್ಯ ಸಚಿವ ಉಮೇಶ ಕತ್ತಿ ಅವರು ತಜ್ಞರ ನಿಯೋಗ ನೀಡಿದ್ದ ಶಿಫಾರಸು ಅಳವಡಿಸಿಕೊಳ್ಳಲು ಹಿರಿಯ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಪರಿಸರ ಬಜೆಟ್ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಕರಡು ಪ್ರಸ್ತಾವನೆ ತಯಾರಿಸಲು ಸೂಚನೆ ನೀಡಿದ್ದಾರೆ.
ಈ ಹಿಂದೆ ಸಲ್ಲಿಸಿರುವ ಪರಿಸರ ಬಜೆಟ್ ಮುಖ್ಯ ಅಂಶಗಳ ಬಗ್ಗೆ ಅಶೀಸರ ಅವರು ಮತ್ತೊಮ್ಮೆ ಮುಖ್ಯ ಮಂತ್ರಿಗಳ ಗಮನ ಸೆಳೆದಿದ್ದಾರೆ.
ರೈತರಿಗೆ ವಿಶೇಷ ಸೋಲಾರ್ ಸೌಲಭ್ಯ ನೀಡಿಕೆ, ಕೃಷಿ ಅರಣ್ಯ, ಕಾಡಿನ ಜೇನು ಅಭಿವೃದ್ಧಿ, ಬಯಲು ಸೇಮೆ ಹಸಿರೀಕರಣ ಯೋಜನೆಗಳ ಪ್ರಸ್ತಾಪ ಇದೆ. ಕರಾವಳಿ ಹಸಿರು ಕವಚ ಯೋಜನೆ, ದೇವರಕಾಡು ಯೋಜನೆ, ಗ್ರಾಮ ಸಾಮೂಹಿಕ ಭೂಮಿ ಸಂರಕ್ಷಣಾ ಯೋಜನೆ, ಗ್ರಾಮ ಅರಣ್ಯ ಸಮೀತಿ, ಪಂಚಾಯತ ಜೀವವೈವಿಧ್ಯ ಸಮೀತಿ ಬಲವರ್ಧನಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಶಿಫಾರಸು ಮಾಡಲಾಗಿದೆ.
ಅಮೃತ ಕಾವಲ್‍ಗಳು, ಕಾನು ಅರಣ್ಯ, ರಾಂ ಪತ್ರೆಜಡ್ಡಿಸಂರಕ್ಷಣಾಯೋಜನೆ, ನದೀ ಮೂಲಗಳ ಸಂರಕ್ಷಣೆ, ಕೆರೆಗಳ ಪುನಶ್ಚೇತನ ಯೋಜನೆಗಳ ಪ್ರಸ್ತಾವನೆ ಮಾಡಲಾಗಿದೆ. ಮಲೆನಾಡಿನ ಭೂ ಕುಸಿತ ತಡೆಗೆ ಸುರಕ್ಷಾ ಯೋಜನೆಗಳನ್ನು ಸಲಹೆ ಮಾಡಲಾಗಿದೆ. ಡಾ.ಟಿ.ವಿ ರಾಮಚಂದ್ರ, ಪ್ರೊ.ಬಿ.ಎಂ ಕುಮಾರ ಸ್ವಾಮಿ, ಡಾ.ವಾಮನ್ ಆಚಾರ್ಯ, ವೈ. ಬಿ. ರಾಮಕೃಷ್ಣ, ಡಾ.ಕೇಶವ ಕೊರ್ಸೆ ಮುಂತಾದ ತಜ್ಞರು ಪರಿಸರ ಬಜೆಟ್ ಶಿಫಾರಸು ತಯಾರಿಗೆ ಸಹಕರಿಸಿದ್ದರು.