ಕಾರವಾರ: ನಗರದ ಕೋಡಿಭಾಗ-ಕಾರವಾರ ರಸ್ತೆ ಹಾಗೂ ಹೂವಿನ ಚೌಕಿಗೆ ವೀರ ಹೋರಾಟಗಾರ ಹೇಂಜಾ ನಾಯ್ಕ ಅವರ ಹೆಸರನ್ನು ಮಾರ್ಚ್ 15ರೊಳಗೆ ನಾಮಕರಣ ಮಾಡಬೇಕು. ಇಲ್ಲವಾದಲ್ಲಿ ನಾವೇ ಸಾರ್ವಜನಿಕರ ಸಹಕಾರ ಪಡೆದು ನಾಮಕರಣ ಮಾಡಬೇಕಾಗುತ್ತದೆ ಎಂದು ಹೇಂಜಾ ನಾಯ್ಕ ಅಭಿಮಾನಿ ಬಳಗದ ರಾಘು ನಾಯ್ಕ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ವೀರ ಹೋರಾಟಗಾರ ಹೇಂಜಾ ನಾಯ್ಕ ಹೆಸರನ್ನು ನಾಮಕರಣ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ನಗರಸಭೆ ಹಾಗೂ ಶಾಸಕರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ಮಾರ್ಚ್ 15ಕ್ಕೆ ಹೇಂಜಾ ನಾಯ್ಕ ಅವರ ಜನ್ಮ ದಿನವಿದ್ದು, ಅಂದೇ ನಾಮಕರಣ ಮಾಡಬೇಕು. ಇಲ್ಲದೇ ಇದ್ದರೆ ಎಲ್ಲ ಸಮಾಜದವರು ಸೇರಿ ಹೋರಾಟದ ಮೂಲಕ ನಾಮಕರಣ ಮಾಡುತ್ತೇವೆ ಎಂದು ರಾಘು ನಾಯ್ಕ ತಿಳಿಸಿದರು.
ಛತ್ರಪತಿ ಶಿವಾಜಿ ಮಹಾರಾಜ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರಂತೆಯೇ ಹೇಂಜಾ ನಾಯ್ಕ ಅವರ ಜೀವನ ಮತ್ತು ಇತಿಹಾಸವನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು. ಟಿಪ್ಪುವಿನ ಬೆದರಿಕೆಗೆ ಸೊಪ್ಪು ಹಾಕದ ಹೆಂಜಾ ನಾಯ್ಕ ತನ್ನ ಪ್ರಜೆಗಳೇ ತನಗೆ ಮುಖ್ಯ ಮಕ್ಕಳ ಬಗ್ಗೆ ನಾನು ಚಿಂತಿಸಲಾರೆ ಎಂದು ಟಿಪ್ಪುವಿಗೆ ಸವಾಲು ಹಾಕಿದ್ದರು ಎಂದು ಎಂದು ಗಜೇಂದ್ರ ನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮನೋಜ ಬಾಂದೇಕರ್, ಡಾ. ಗಜಾನನ ನಾಯ್ಕ ಹಾಗೂ ಸಮಾಜದ ಇನ್ನಿತರರು ಇದ್ದರು.