ಕಾರವಾರ: ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ನರೇಗಾ ಯೋಜನೆ ಕೇವಲ ಯೋಜನೆಯಾಗಿರದೇ ಕಾನೂನು ಬದ್ಧ ಕಾಯ್ದೆಯಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅಭಿಪ್ರಾಯಪಟ್ಟರು.
ಹಟ್ಟಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಕಲಬೇಣ ಗ್ರಾಮದಲ್ಲಿ ಬುಧವಾರ ನರೇಗಾ ದಿವಸ್ ಅಂಗವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ, ಜಿಲ್ಲಾ, ತಾಲೂಕಾ ಹಾಗೂ ಗ್ರಾಮ ಪಂಚಾಯತಿ ಮತ್ತು ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉತ್ತರಕನ್ನಡ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ನರೇಗಾ ದಿನಾಚರಣೆ, ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರ, ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ನರೇಗಾದಡಿ ಜನರಿಗೆ ನಿಗದಿತ ಸಮಯದಲ್ಲಿ ಸಮಾನ ಕೂಲಿ, ಕೆಲಸ ನೀಡಲಾಗುತ್ತಿದೆ. ಜಿಲ್ಲೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮಾನತೆ ಕಾಪಾಡುತ್ತಿದ್ದು, ಪ್ರತಿಯೊಬ್ಬರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಯಾವುದೇ ಬೇಧ ಭಾವವಿಲ್ಲದೆ ಕೆಲಸವನ್ನು ನೀಡಲಾಗುತ್ತಿದೆ. ಒಬ್ಬ ಸಾಮಾನ್ಯನಿಂದ ಹಿಡಿದು ನೌಕರಿ ಮಾಡುವವರು ಈ ಯೋಜನೆಯ ಫಲ ಪಡೆಯಬಹುದಾಗಿದೆ. ಇತರೆ ಯೋಜನೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಗದಿತ ಸಮಯದಲ್ಲಿ ಕೂಲಿ ಮತ್ತೆ ಕೆಲಸ ನೀಡಲಾಗುತ್ತಿದೆ. ಒಂದು ವೇಳೆ ನಿರ್ಲಕ್ಷ್ಯ ಕಂಡುಬಂದರೆ ಕಾನೂನಿನ ರೀತಿಯಲ್ಲಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದರು.
ಆರ್ಥಿಕ ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನರೇಗಾ ಇಂದು ಕಾರ್ಯ ಪ್ರವೃತ್ತವಾಗುತ್ತಿದೆ. ವೈಯಕ್ತಿಕ ಹಾಗೂ ಸಮುದಾಯದ ಕಾಮಗಾರಿಗಳ ಲಭ್ಯತೆ ಪ್ರತಿ ಹಂತದಲ್ಲೂ ನಡೆಯುತ್ತಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಜಿಲ್ಲೆಯಾದ್ಯಂತ 229 ಕೊಳಚೆ ಮುಕ್ತ ಗ್ರಾಮಗಳನ್ನಾಗಿ ಅಭಿವೃದ್ಧಿ ಪಡಿಸಿದ್ದೇವೆ ಎಂದು ತಿಳಿಸಿದರು.
ನಮ್ಮ ಯೋಜನೆಯ ಮುಖ್ಯ ಉದ್ದೇಶ ಮಾನವ ದಿನಗಳನ್ನು ಹೆಚ್ಚಿಸುವುದು ಮಾತ್ರವಲ್ಲ. ಅಭಿವೃದ್ಧಿಯ ಜೊತೆಯಲ್ಲಿ ಆರೋಗ್ಯ ಶಿಬಿರ, ತರಬೇತಿ ಕಾರ್ಯಾಗಾರ, ಸ್ವಯಂ ಉದ್ಯೋಗ ನೀಡಲು ಅವಕಾಶವಿದ್ದು, ನರೇಗಾದಡಿ ನೂರು ದಿನ ಪೂರೈಸಿದವರು ನಿರಾಶದಾಯಕವಾಗುವ ಅವಶ್ಯಕತೆಯಿಲ್ಲ. ನಂತರ ಕೂಡ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ನರೇಗಾದಡಿ ಕಾರ್ಯನಿರ್ವಸುತ್ತಿರುವ ಪ್ರತಿಯೊಬ್ಬ ನೌಕರರು ಉತ್ತಮವಾಗಿ ತಮ್ಮ ಜವಾಬ್ದಾರಿ ನಿಭಾಯೊಸುತ್ತಿದ್ದು, ಮುಂಬರು ದಿನಗಳಲ್ಲಿ ರಾಜ್ಯದಿಂದ ನೀಡುವ ನಿಗದಿತ ಮಾನವ ದಿನಗಳ ಸೃಜನೆಗಿಂತ ಹೆಚ್ಚಿನ ಮಟ್ಟದಲ್ಲಿ ಸಾಧನೆಗೆ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಗ್ರಾಪಂ ಅಧ್ಯಕ್ಷೆ ನಿಶಾ ನಾಗರಾಜ ನಾಯ್ಕ್ ಅವರು ವಹಿಸಿದ್ದರು. ನರೇಗಾದಡಿ ನೂರು ದಿನ ಪೂರೈಸಿದ ನಾಲ್ಕು ಜನ ಕೂಲಿಕಾರರಿಗೆ ಪ್ರಶಂಸನಾ ಪತ್ರ, ಕಿರು ಕಾಣಿಕೆ ಹಾಗೂ ಸಲಕರಣಾ ಬುಟ್ಟಿ ನೀಡಿ ಸನ್ಮಾನಿಸಿದರು. ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸ್ವತಃ ಸಿಇಒ ಅವರು ರಕ್ತ ತಪಾಸಣೆ ಮಾಡಿಸಿಕೊಂಡು ಶಿಬಿರಕ್ಕೆ ಚಾಲನೆ ನೀಡಿದರು.
ನಂತರ ಸ್ವಚ್ಛತಾ ಕಾರ್ಯದ ಜೊತೆಗೆ ಜನ ಜಾಗೃತಿ ಜಾಥಾ, ಶಾಲಾ ಮಕ್ಕಳಿಗೆ ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು. ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕ್ಯಾಲೆಂಡರ್ ಮತ್ತು ಡೈರಿಯನ್ನ ಬಿಡುಗಡೆ ಮಾಡಲಾಯಿತು.
ಜಿಪಂ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ಡಿ.ಎಂ.ಜಕ್ಕಪ್ಪಗೋಳ, ಅಂಕೋಲಾ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ. ಸಾವಂತ, ನರೇಗಾ ಸಹಾಯಕ ನಿರ್ದೇಶಕ ಸುನಿಲ್ ಎಂ., ತಾಲೂಕಾ ಆರೋಗ್ಯ ಅಧಿಕಾರಿ ಡಾ. ನಿತಿನ್ ಹೊಸಮಳ್ಕರ, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಗ್ರಾಪಂ ಸಿಬ್ಬಂದಿ ಹಾಗೂ ಜಿಲ್ಲೆಯ ಎಲ್ಲ ನರೇಗಾ ನೌಕರರು ಉಪಸ್ಥಿತರಿದ್ದರು