ಅಂಕೋಲಾ : 3 ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತ ಹೋರಾಟದಲ್ಲಿ ಹುತಾತ್ಮರಾದ 700 ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಪರಿಹಾರ ನೀಡದೇ, ಬೆಂಬಲ ಬೆಲೆ ಖಾತ್ರಿಗೆ ಕಾನೂನಾತ್ಮಕ ಭದ್ರತೆ ಒದಗಿಸದೇ ಕೇಂದ್ರ ಸರಕಾರ ವಿಶ್ವಾಸ ದ್ರೋಹ ಎಸಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟಿಸಲಾಯಿತು. ದೇಶಾದ್ಯಂತ ಪ್ರತಿಭಟನೆಗೆ ಸಂಯುಕ್ತ ಕಿಸಾನ ಮೋರ್ಚಾ ಕರೆ ನೀಡಿತ್ತು.
ದೆಹಲಿ ರೈತ ಹೋರಾಟ ಬೆಂಬಲಿಸಿ ಇಡೀ ದೇಶಾದ್ಯಂತ ರೈತರು ಚಳುವಳಿ ನಡೆಸಿದ್ದರು. ಚಳುವಳಿ ನಿರತ ಅನ್ನದಾತರ ಮೇಲೆ ಅನೇಕ ಸುಳ್ಳು ಮೊಕದ್ದಮೆಗಳನ್ನು ದಾಖಲು ಮಾಡಲಾಗಿತ್ತು. ದೆಹಲಿಯಲ್ಲೂ ಹೋರಾಟಗಾರರ ಮೇಲೆ ಅನೇಕ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣ ವಾಪಸ್ಸು ಪಡಯುವ ಭರವಸೆ ಈಡೇರಿಸದೆ ದ್ರೋಹ ಎಸಗಿದೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶಾಂತಾರಾಮ ನಾಯಕ ತಿಳಿಸಿದ್ದರು. ಕೇಂದ್ರ ಸರಕಾರ ರೈತರ ತಾಳ್ಮೆಯನ್ನು ಪರೀಕ್ಷಿಸದೇ ಅನ್ನದಾತರಿಗೆ ಕೊಟ್ಟ ಭರವಸೆ ಈಡೇರಿಸಬೇಕೆಂದರು. ಬೇಲೆಕೇರಿಯಲ್ಲಿ ರೈತರ ಪ್ರತಿಭಟನೆ ಸಭೆ ನಡೆಯಿತು
ಹೋರಾಟದಲ್ಲಿ ತಾಲೂಕ ಕಾರ್ಯದರ್ಶಿ ಸಂತೋಷ ನಾಯ್ಕ, ಪದಾಧಿಕಾರಿಗಳಾದ ನಾಗೇಶ ಗೌಡ, ಉದಯ ನಾಯ್ಕ, ಸದಸ್ಯರಾದ ಶಾಂತಾರಾಮ ನಾಯ್ಕ, ಕೀರಾ ನಾಯ್ಕ, ರಾಜೇಶ ನಾಯ್ಕ, ದೇವು ಗೌಡ, ಕಾಮಣ್ಣ ಗೌಡ, ಬೋಳಾ ಗೌಡ ಮುಂತಾದವರು ಪಾಲ್ಗೊಂಡಿದ್ದರು.