ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಬಿದ್ದು ಮೃತಪಟ್ಟ ದುರ್ಘಟನೆ ಬುಧವಾರ ಸಂಜೆ ನಡೆದಿದೆ.
ತಾಲೂಕಿನ ಉಪ್ಪಡಿಕೆಯ ಆದಿತ್ಯ ಹೆಗಡೆ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದು, ಈತ ಹಾಲು ಡೈರಿಯ ಮುಖ್ಯಕಾರ್ಯನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ. ಬುಧವಾರ ಸಂಜೆ ಡೈರಿ ಕೆಲಸ ಮುಗಿಸಿ, ಜಿಮ್ ವರ್ಕೌಟ್ ಮಾಡಿ ಮನೆಗೆ ಬರುವ ವೇಳೆಗೆ ಈ ಅವಘಡ ಸಂಭವಿಸಿದೆ. ರಸ್ತೆ ದುರಸ್ತಿ ಕೆಲಸ ನಡೆಯುತ್ತಿದ್ದು, ಬದಲಿ ರಸ್ತೆಯ ನಾಮಫಲಕ ಹಾಕದೇ ಇರುವುದು ಈ ದುರಂತಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಾಮಾಜಿಕ ಕಾರ್ಯದಲ್ಲಿ ಸಕ್ರಿಯ; ಕ್ರೀಯಾಶಾಲಿ ಯುವಕ:
ಮೃತಪಟ್ಟ ಆದಿತ್ಯ ಹೆಗಡೆಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತನಾಗಿದ್ದು, ತಾಲೂಕು ಕಾರ್ಯವಾಹರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಸಂಘಟನೆ, ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ಅತ್ಯಂತ ಕ್ರೀಯಾಶೀಲರಾಗಿ ಭಾಗವಹಿಸುತ್ತಿದ್ದರು.
ಅಕಾಲ ಸಾವಿನಲ್ಲೂ ನೇತ್ರದಾನದ ಸಾರ್ಥಕತೆ:
ಮರಣದ ನಂತರ ನೇತ್ರದಾನದ ನೋಂದಣಿ ಮಾಡಿದ್ದ ಆದಿತ್ಯನ ಇಚ್ಛೆಯಂತೆ ಬುಧವಾರ ತಡರಾತ್ರಿ ಶಿರಸಿಯ ಖ್ಯಾತ ನೇತ್ರ ತಜ್ಞ ಡಾ. ಕೆ.ವಿ.ಶಿವರಾಮ ಮಾರ್ಗದರ್ಶನದಲ್ಲಿ ಡಾ. ವಿಶ್ವನಾಥ ಅಂಕದ್ ತಂಡವು ಮಧ್ಯರಾತ್ರಿ ಸಿದ್ದಾಪುರಕ್ಕೆ ತೆರಳಿ ಮೃತ ಯುವಕನ ಇಚ್ಛೆಯಂತೆ ನೇತ್ರದಾನದ ಪ್ರಕ್ರಿಯೆ ಪೂರ್ಣಗೊಳಿಸಿದರು. ಅಕಾಲ ಸಾವಿನಲ್ಲಿ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಆದಿತ್ಯ ಹೆಗಡೆಯ ಕುರಿತು ಪ್ರಶಂಸೆ ವ್ಯಕ್ತವಾಗಿದೆ.
ಗಣ್ಯರ ಕಂಬನಿ, ಸಂತಾಪ:
ಅಪಘಾತದಲ್ಲಿ ಮೃತಪಟ್ಟ ಯುವಕ ಆದಿತ್ಯ ಹೆಗಡೆ ನಿಧನಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಆರ್.ಎಸ್.ಎಸ್ ಪ್ರಮುಖರು ಸಂತಾಪ ಸೂಚಿಸಿದ್ದಾರೆ.