ಕಾರವಾರ: ಕಳೆದ ಮಳೆಗಾಲದ ಪ್ರವಾಹದಲ್ಲಿ ಕಾಳಜಿ ಕೇಂದ್ರಕ್ಕೆ ಆಹಾರ ಧಾನ್ಯ ಪೂರೈಸಿರುವ ಸ್ಥಳೀಯ ಅಂಗಡಿಕಾರರಿಗೆ ಅರ್ಧ ವರ್ಷ ಕಳದರೂ ಇನ್ನೂ ಹಣ ಬಿಡುಗಡೆಯಾಗಲಿಲ್ಲ. ಮುಂದಿನ ಮಳೆಗಾಲದಲ್ಲಿ ಪ್ರವಾಹ ಸಂಭವಿಸಿದ್ದಲ್ಲಿ ಕಾಳಜಿ ಕೇಂದ್ರಕ್ಕೆ ಆಹಾರ ಧಾನ್ಯ ಪೂರೈಸಲು ಅಂಗಡಿಕಾರರು ಹಿಂದೇಟು ಹಾಕುವುದರಲ್ಲಿ ಸಂದೇಹವಿಲ್ಲ.
ಕಳೆದ ವರ್ಷದ ಜುಲೈ ತಿಂಗಳಲ್ಲಿ ಅತಿವೃಷ್ಠಿಯಿಂದ ಹಾಗು ಕಾಳಿ ನದಿಗೆ ಪ್ರವಾಹ ಉಂಟಾಗಿರುವ ಪರಿಣಾಮ ನದಿ ತೀರದ ಗ್ರಾಮಗಳಲ್ಲಿ ನೀರು ಆವರಿಸಿಕೊಂಡು ಅದೇಷ್ಟೋ ಹಾನಿ ಸಂಭವಿಸಿತ್ತು. ನೂರಾರು ಮನೆಗಳು ಧರೆಗೆ ಉರುಳಿದ್ದವು. ಇನ್ನೂ ಅನೇಕ ಮನೆ ಗೋಡೆಗಳಿಗೆ ಬಿರುಕು ಉಂಟಾಗಿ ಮನೆ ವಾಸಕ್ಕೆ ಯೋಗ್ಯವಾಗದ ಪರಿಸ್ಥಿತಿಯಾಗಿತ್ತು. ಪ್ರವಾಹದಿಂದ ಆತಂಕದ ಸ್ಥಿತಿಯಲ್ಲಿದ್ದ ಜನರಿಗೆ ಹಾಗೂ ಮನೆ ಕಳೆದುಕೊಂಡವರಿಗೆ ಸುರಕ್ಷಿತ ಪ್ರದೇಶದಲ್ಲಿ ಸಾಗಿಸಿ ರಕ್ಷಣೆ ನೀಡಲಾಗಿತ್ತು. ಪ್ರವಾಹ ನಿಲ್ಲುವವರೆಗೂ ಆಯಾ ಗ್ರಾಮದಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರನ್ನಿಡಲಾಗಿತ್ತು. ಅಲ್ಲಿಯೇ ಸಂತ್ರಸ್ತರಿಗೆ ಊಟ ಉಪಹಾರದ ಜೊತೆಗೆ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ನೀಡಲಾಗಿ ಧೈರ್ಯ ತುಂಬುವ ಕಾರ್ಯ ಜಿಲ್ಲಾಡಳಿತದಿಂದ ಮಾಡಲಾಗಿತ್ತು.
ಈ ಸಂಧರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳಿಂದ, ದಾನಿಗಳಿಂದಲೂ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಮೂಲಕ ನೆರವು ನೀಡಲಾಗಿತ್ತು.
ಕೆಲ ಗ್ರಾಮಗಳ ಕಾಳಜಿ ಕೇಂದ್ರದಲ್ಲಿ ಪ್ರವಾಹ ಸಂತ್ರಸ್ತರು ಸುಮಾರು ಒಂದು ತಿಂಗಳುಗಳ ಕಾಲ ವಾಸವಿದ್ದು ತಮ್ಮ ಮನೆ ದುರುಸ್ಥಿ ಮತ್ತು ಸ್ವಚ್ಚಗೊಳಿಸಿದ ನಂತರವೇ ಮನೆಗೆ ವಾಪಸ್ಸಾಗಿದ್ದರು.
ಒಂದೊಂದು ಕಾಳಜಿ ಕೇಂದ್ರದಲ್ಲಿ ಸುಮಾರು ನೂರಕ್ಕಿಂತ ಅಧಿಕ ಜನರು ರಕ್ಷಣೆ ಪಡೆದುಕೊಂಡಿದ್ದರು. ಇವರ ಊಟ ಉಪಹಾರದ ವ್ಯವಸ್ಥೆ ಕಾಳಜಿ ಕೇಂದ್ರದಲ್ಲಿಯೇ ಮಾಡಲಾಗಿತ್ತು. ಸ್ಥಳಿಯ ಕಿರಾಣಿ ಅಂಗಡಿಗಳಿಂದ ಆಹಾರ ಧಾನ್ಯಗಳನ್ನು ಕಂದಾಯ ಇಲಾಖೆ ಮೂಲಕ ಪಡೆಯಲಾಗಿತ್ತು. ಅಲ್ಲದೇ ತರಕಾರಿ , ಸಾಬೂನು, ಟೂತ್ ಪೇಸ್ಟ್ ಗಳನ್ನು ಸಹ ಸ್ಥಳೀಯ ವಿತರಕರಿಂದ ಖರೀದಿಸಲಾಗಿತ್ತು. ತಮ್ಮ ಗ್ರಾಮದ ಜನರು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವ ಉದ್ದೇಶದಿಂದ ಹಾಗು ಕಂದಾಯ ಇಲಾಖೆಯ ಅಧಿಕಾರಿಗಳ ಮನವಿ ಮೇರೆಗೆ ಹಣ ಪಡೆಯದೇ ಸಾಲವಾಗಿ ಆಹಾರ ಧಾನ್ಯ ಹಾಗು ಇತರ ವಸ್ತುಗಳನ್ನು ಪೂರೈಸಿದ್ದರು.
ಪ್ರವಾಹದ ಪರಿಸ್ಥಿತಿ ಹತೋಟಿಗೆ ಬಂದ ನಂತರ ಖರೀಸಿರುವ ವಸ್ತುಗಳ ಹಣ ಪಾವತಿಸುವುದಾಗಿ ಸ್ಥಳೀಯ ಅಂಗಡಿ ಮಾಲಿಕರಿಗೆ ಕಂದಾಯ ಅಧಿಕಾರಿಗಳು ತಿಳಿಸಿದ್ದರು. ಆದರೆ 6 ತಿಂಗಳು ಕಳೆದರೂ ಇನ್ನೂ ಹಣ ಪಾವತಿಯಾಗದಿರುವುದು ಸ್ಥಳೀಯ ಅಂಗಡಿಕಾರರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೂ ಕೆಲ ಅಂಗಡಿಕಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಅಂಗಡಿಗಳಲ್ಲಿ ವಸ್ತುಗಳನ್ನು ತಂದಿಡಲಾಗದೇ ಅಂಗಡಿ ಖಾಲಿ ಖಾಲಿಯಾಗಿಸಿಕೊಂಡು ಕಂದಾಯ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಆಹಾರ ಧಾನ್ಯ ಹಾಗು ಅಗತ್ಯ ವಸ್ತುಗಳನ್ನು ಪೂರೈಸಿರುವ ಅಂಗಡಿ ಮಾಲಿಕರಿಗೆ ಹಣ ಬಿಡುಗಡೆ ಮಾಡಲು ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಕಡತ ತಯಾರಿಸಿ ಸಹಾಯಕ ಆಯುಕ್ತರ ಕಚೇರಿಗೆ ನೀಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಸಹಾಯಕ ಆಯುಕ್ತ ವಿದ್ಯಾಶ್ರೀ ಚಂದರಗಿರವರು ಕಡತಗಳನ್ನು ಪರಿಶೀಲಿಸಿ ಹಣ ಬಿಡುಗಡಗೆ ಮುಂಜುರಾತಿ ನೀಡದಿರುವುದರಿಂದ ಅಂಗಡಿಕಾರರಿಗೆ ಹಣ ಪಾವತಿಸಲು ವಿಳಂಬವಾಗಿದೆ.
ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರವಾದ ಪರುಸ್ಥಿತಿ ಎದುರಾದಾಗ ನಾವು ಕೂಡ ಅಂಗಡಿಯಲ್ಲಿನ ವಸ್ತುಗಳನ್ನು ಸಂರಕ್ಷಿಸಲು ಸಂಕಷ್ಟ ಎದುರಿಸಿದ್ದೆವು. ಹಾಗಯೇ ಅನೇಕರು ತಮ್ಮ ಉಟ್ಟ ಬಟ್ಟೆಯಲ್ಲಿಯೇ ಕಾಳಜಿ ಕೇಂದ್ರಕೆ ಬಂದಿದ್ದರು. ಅವರಿಗೆ ಆಹಾರದ ಅಗತ್ಯತೆ ಇರುವುದನ್ನು ಕಂಡು ಹಾಗು ಕಂದಾಯ ಇಲಾಖೆಯ ಮನವಿ ಮೇರೆಗೆ ಆಹಾರ ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡಿದ್ದೇವು. ಆದರೆ ಇನ್ನೂ ಹಣ ಪಾವತಿಯಾಗದಿರುವುದು ಸಮಸ್ಯೆಯಾಗಿದೆ. ನಾವು ಕೂಡ ಅಂಗಡಿಗೆ ಬೇಕಾದ ವಸ್ತುಗಳನ್ನು ಖರೀದಿಸಿಯೆ ತರಬೇಕಾಗುತ್ತದೆ. ತಂದಿರುವ ವಸ್ತು ಮಾರಾಟ ವಾದ ನಂತರ ಅದೇ ಹಣದಲ್ಲಿ ಮತ್ತಷ್ಟು ವಸ್ತು ತರುತ್ತೇವೆ. ಆದರೆ ಕಳೆದ ಮಳೆಗಾಲದಿಂದ ಅಂಗಡಿಗೆ ವಸ್ತುಗಳನ್ನು ತಂದಿಡಲು ಹಣದ ಸಮಸ್ಯೆ ಎದುರಾಗಿದೆ.