ಭಟ್ಕಳ: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಗೆ ತಕ್ಕಂತೆ ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ರೂಪಿಸಿದ ವಿನೂತನ ಯೋಜನೆ ಆತ್ಮ ನಿರ್ಭರ ಬಾಲಿಕಾ.
ಹೆಣ್ಣು ಮಕ್ಕಳು ತಮ್ಮ ಶಿಕ್ಷಣದ ಆರ್ಥಿಕ ಹೊರೆಯನ್ನು ತಾವೇ ಸ್ವತ: ಪೂರೈಸಿಕೊಳ್ಳಲು ಇದು ಅತ್ಯಂತ ಸಹಕಾರಿಯಾಗಿದೆ. ಶಿಕ್ಷಕರಾದ ಪರಮೇಶ್ವರ ನಾಯ್ಕ ಇವರು ತಮ್ಮ ಮನೆಯ ಸುತ್ತಮುತ್ತಲಿನ 3 ನೇ ವಯಸ್ಸಿನಿಂದ ಪದವಿಯ ಹಂತದವರೆಗಿನ 13 ಹೆಣ್ಣು ಮಕ್ಕಳನ್ನು ಸೇರಿಸಿಕೊಂಡು 2016ರಲ್ಲಿ ಯೋಜನೆಯನ್ನು ಆರಂಭಿಸಿದರು. ವಾರದ ರಜಾ ದಿನದಂದು ಈ ಹೆಣ್ಣುಮಕ್ಕಳು ಸಭೆ ಸೇರಿ ತಲಾ 5 ರೂಪಾಯಿ ಯಂತೆ ಹೂಡಿಕೆ ಮಾಡಿ ಒಟ್ಟಾದ ಹಣವನ್ನು ತಂಡದ ನಾಯಕರ ಬಳಿ ನೀಡುತ್ತಿದ್ದರು. ಚಿಕ್ಕ ಮಕ್ಕಳ ಪರವಾಗಿ ಅವರ ಪಾಲಕರು ಪೋಷಕರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಸಭೆ ನಡೆಸಲು ರೂಪುರೇಷೆ ಹಾಗೂ ಹಣದ ವ್ಯವಹಾರದ ಬಗ್ಗೆ ದಾಖಲೆ ಇಡುವ ಕ್ರಮವನ್ನು ಶಿಕ್ಷಕರು ಅವರಿಗೆ ತಿಳಿಸಿದರು.
ಹೀಗೆ ಒಟ್ಟಾದ ಹಣವನ್ನು ಹೆಣ್ಣುಮಕ್ಕಳು ತಮ್ಮ ಪಠ್ಯ ಪುಸ್ತಕ ಖರೀದಿ, ಶಾಲಾ ಶುಲ್ಕ ಬರಿಸುವುದು, ಬಸ್ ಪಾಸ್ ನಿರ್ವಹಣೆ ಹಾಗೂ ತಮ್ಮ ವೈಯಕ್ತಿಕ ನೈರ್ಮಲ್ಯ ಪಾಲನೆಗೆ ಪಡೆದುಕೊಳ್ಳುವುದು ಹಾಗೂ ಹಣ ಪಡೆದ ಸದಸ್ಯರು ತಿಂಗಳೊಳಗೆ ನಿಗದಿಪಡಿಸಿದ ಹೆಚ್ಚಿನ ಮೊತ್ತದೊಂದಿಗೆ ಸಂಘಕ್ಕೆ ಹಣವನ್ನು ಮರುಭರಣ ಮಾಡುತ್ತಿದ್ದರು. ಹೀಗೆ ಇಲ್ಲಿಯವರೆಗೆ ಸುಮಾರು ಹದಿನೈದು ಸಾವಿರ ರೂಪಾಯಿಗಳು ಸಂಗ್ರಹ ವಾಗಿದ್ದು, ಇದರ ಸಹಾಯದಿಂದ 3 ವಿದ್ಯಾರ್ಥಿನಿಯರು ತಮ್ಮ ಪದವಿಯನ್ನು ಪೂರೈಸಿದ್ದಾರೆ.
ಇದರ ಯಶಸ್ಸಿನಿಂದ ಯೋಜನೆಯನ್ನು ತಮ್ಮ ಶಾಲೆಯಲ್ಲಿರುವ ಎಲ್ಲಾ ಹೆಣ್ಣುಮಕ್ಕಳು ವಾಸಿಸುವ ವಿವಿಧ ಮಜಿರೆಗಳಲ್ಲಿ ಪ್ರಾರಂಭಿಸಿದರು . 5 ರಿಂದ 10 ಹೆಣ್ಣು ಮಕ್ಕಳ ಗುಂಪನ್ನು ಮಾಡಿ ಅದಕ್ಕೆ ಒಬ್ಬಳು ನಾಯಕಿಯನ್ನು ನೇಮಿಸಿ ರೂಪು ರೇಷೆ ತಿಳಿಸಿದರು ತಮ್ಮ ಹತ್ತಿರದ ಶಾಲೆಗಳಿಗೂ ಈ ಯೊಜನೆ ಬಗ್ಗೆ ತಿಳಿಸಿ ಅವರೂ ಸಹ ತಮ್ಮ ಶಾಲಾ ಹೆಣ್ಣು ಮಕ್ಕಳು ಈ ಯೋಜನೆ ಪ್ರಾರಂಭಿಸುವಂತೆ ಮಾಡಿದ್ದಾರೆ.
ಇಲ್ಲಿಯವರೆಗೆ ಸುಮಾರು 100 ಹೆಣ್ಣು ಮಕ್ಕಳು ಇದರ ಪಾಲುದಾರರಾಗಿದ್ದು ತಲಾ ರೂ 5,10,15,20 ಹೂಡಿಕೆಮಾಡಿ ಸಾವಿರಾರು ರೂಪಾಯಿಗಳನ್ನು ಸಂಗ್ರಹಿಸಿ ತಮ್ಮ ಶಿಕ್ಷಣದ ಹಾಗೂ ವೈಯಕ್ತಿಕ ಶುಚಿತ್ವದ ಜವಾಬ್ದಾರಿಯನ್ನು ತಾವೆ ಸ್ವತ: ನಿಭಾಯಿಸಿಕೊಳ್ಳುತ್ತಿದ್ದಾರೆ.
ಈ ಕಾರ್ಯಕ್ಕೆ ಶಾಲೆಯ ಇತರೇ ಶಿಕ್ಷಕರು ಸಹ ಸಾಥ್ ನೀಡುತ್ತಿದ್ದಾರೆ. ವಾರದ ರಜಾ ದಿನದಂದು ಶಿಕ್ಷಕರು ವಿವಿಧ ಸಂಘಗಳು ಇರುವಲ್ಲಿಗೆ ತೆರಳಿ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೇವಿದಾಸ ಮೋಗೇರ ಇವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ .ತಾಲೂಕಿನ ಯಾವುದೇ ಶಾಲೆಯವರು ಈ ಯೊಜನೆಯನ್ನು ಪ್ರಾರಂಭಿಸಲು ಪರಮೇಶ್ವರ ನಾಯ್ಕ ಇವರನ್ನು ಸಂಪರ್ಕಿಸಬಹುದಾಗಿದೆ.
ವಿದ್ಯಾರ್ಥಿಗಳ ಅಭಿಪ್ರಾಯ:
ಯೋಜನೆಯ ಸಹಾಯದಿಂದ ಈಗ ನಾನು ನನ್ನ ಸ್ವಂತ ಹಣದಿಂದ ಬಿ,ಕಾಂ ಪದವಿ ಮಾಡುತ್ತಿದ್ದೇನೆ.
-ದೀಪಿಕಾ ಶ್ರೀಧರ ನಾಯ್ಕ
ಬಿ.ಎಸ್.ಸಿ ಪದವಿ ಮುಗಿಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಲು ಈ ಯೋಜನೆ ಸಹಕಾರ ನೀಡಿದೆ.
-ತನುಜಾ ಮಂಜುನಾಥ ನಾಯ್ಕ
ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ.
-ನಾಗಶ್ರೀ ಈಶ್ವರ ನಾಯ್ಕ