ಕಾರವಾರ: ಚಿಗುರು ಎಲೆಗಳ ಶೃಂಗಾರ, ಬಂಗಾರ ಬಣ್ಣದ ಹೂಗಳ ಗುಚ್ಛದಿಂದ ತಾಲೂಕಿನಾದ್ಯಂತ ಮಾವಿನ ಮರಗಳು ಕಣ್ಮನ ಸೆಳೆಯುತ್ತಿದ್ದು, ಈ ಬಾರಿ ಉತ್ತಮ ಇಳುವರಿ ನೀಡುವ ನಿರೀಕ್ಷೆ ಮೂಡಿಸಿದೆ.
ತಾಲೂಕಿನಲ್ಲಿ ಶೇ 70 ರಷ್ಟು ರೈತರು ಉಪಬೆಳೆಯಾಗಿ ಮಾವು ಬೆಳೆಯುತ್ತಿದ್ದಾರೆ. ಕಳೆದ ವರ್ಷ ಇಬ್ಬನಿ, ಮೋಡ ಕವಿದ ವಾತಾವರಣಕ್ಕೆ ಸಿಲುಕಿ ಕಡಿಮೆ ಇಳುವರಿ ನೀಡಿದ್ದ ಮಾವಿನ ಮರಗಳು, ಈ ಬಾರಿ ಹೂಗಳಿಂದ ಶೃಂಗರಿಸಿಕೊಂಡು ಕಂಗೊಳಿಸುತ್ತಿವೆ. ಇದರಿಂದ ತಾಲೂಕಿನ ನೈತಿಸಾವರ, ಕದ್ರಾ, ಹಣಕೋಣ, ದೇವಳಮಕ್ಕಿ, ಹಳಗಾ-ಉಳಗಾ, ಸಿದ್ಧರ, ಶಿರ್ವೆ, ಗೋಟೆಗಾಳಿ, ಬಾಳನಿ ಸೇರಿದಂತೆ ಹಲವು ಗ್ರಾಮೀಣ ಭಾಗದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ. ಕಳೆದ ವಾರದ ಕೆಲವು ದಿನಗಳಲ್ಲಿ ಇಬ್ಬನಿ ಬೀಳುವುದು, ಮೋಡ ಕವಿದ ವಾತಾವರಣ ಕಂಡುಬಂದರೂ ಮಾವಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂಬುದು ಮಾವು ಬೆಳೆಗಾರರ ಮಾತು.
ರಥದಂತೆ ಕಂಗೊಳಿಸುತ್ತಿರುವ ಮಾವಿನ ಮರಗಳು:
ಕಳೆದ ವರ್ಷವೂ ಸಹ ಹೂವಿನ ಪ್ರಮಾಣ ಅಧಿಕವಾಗಿತ್ತು. ಆದರೆ ಜನೆವರಿಯಲ್ಲಿ ಅತಿಯಾದ ಇಬ್ಬನಿ, ಮೋಡ ಸೇರಿದಂತೆ ಮಾವಿಗೆ ಪೂರಕವಲ್ಲದ ವಾತಾವರಣ ನಿರ್ಮಾಣವಾಗಿ, ರೋಗ ತಗುಲಿ, ಬೆಳೆಗಾರರ ನಿರೀಕ್ಷೆ ಹುಸಿಗೊಳಿಸಿತ್ತು. ಆದರೆ ಈ ಬಾರಿ ಮಾವಿನ ಮರದಲ್ಲಿ ಬರಪೂರ ಹೂವು ತುಂಬಿದ್ದು, ಉತ್ತಮ ಇಳುವರಿ ನಿರೀಕ್ಷೆಯಿದೆ. ಅಲ್ಲದೇ, ಈಗಿನ ವಾತಾವರಣ ಮಾವಿನ ಮರಗಳಿಗೆ ಉತ್ತಮ ಫಸಲು ನೀಡಲು ಪೂರಕವಾದಂತೆ ಕಾಣುತ್ತಿದೆ.
ರೋಗ ನಿಯಂತ್ರಣಕ್ಕೆ ಮಾರ್ಗ:
ಇನ್ನು ಹೂವು ಬಿಟ್ಟು ಕಾಯಿಯಾಗುವ ಸಮಯದಲ್ಲಿ ಮಾವಿನ ಮರಕ್ಕೆ ಸಾಮಾನ್ಯವಾಗಿ ಬೂದಿ ರೋಗ ಬರುತ್ತದೆ. ಬೂದಿರೋಗ ಕಂಡುಬಂದರೆ ಪ್ರತಿ ಲೀಟರ್ ನೀರಿಗೆ 3 ಗ್ರಾಂ ಕರಗುವ ಗಂಧಕ ಅಥವಾ ಪ್ರತಿ ಲೀಟರ್ ನೀರಿಗೆ ಒಂದು ಗ್ರಾಂ ಕಾರ್ಬನ್ ಡೈಜಿಮ್ ಅನ್ನು ಸಿಂಪರಣೆ ಮಾಡಬೇಕು. ಜಿಗಿ ಹುಳ ಬಾಧೆ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 1.5 ಎಂಎಲ್ ಮೊನೊಕೋಟೋಪಾಸ್ ಸಿಂಪರಣೆ ಮಾಡಬೇಕು ಎಂದು ತೋಟಗಾರಿಕಾ ಇಲಾಖೆ ಸಲಹೆ ನೀಡಿದೆ.
ಸಂತೋಷ ಪೆಡ್ನೇಕರ (ಉಳಗಾ ಭಾಗದ ಪ್ರಗತಿಪರ ರೈತ)
ಈ ಬಾರಿ ಮಾವಿನ ಗಿಡಗಳು ಸಾಕಷ್ಟು ಹೂವು ಬಿಟ್ಟಿವೆ. ಸದ್ಯ ಮಾವಿನ ಬೆಳೆಗೆ ಪೂರಕವಾದ ವಾತಾವರಣವಿದ್ದು, ಇದೇ ಪ್ರಮಾಣದಲ್ಲಿ ಕಾಯಿ ಕಟ್ಟಿದರೆ ಉಪ ಬೆಳೆಯಾಗಿ ಬೆಳೆದ ಮಾವಿನ ಗಿಡಗಳು ರೈತರಿಗೆ ಸಹಕಾರಿಯಾಗಲಿದೆ.
ತಾಲೂಕಿನಲ್ಲಿ ಮಿಶ್ರ ಕೃಷಿ ನಡೆಸುವ ರೈತರೇ ಅಧಿಕವಾಗಿದ್ದು, ಶೇ.70 ರಷ್ಟು ರೈತರು ಉಪ ಬೆಳೆಯಾಗಿ ಮಾವು ಬೆಳೆಯುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೇವಳಮಕ್ಕಿಯ ನೈತಿಸಾವರ ಭಾಗದ ರೈತ ಕುಟುಂಬವೊಂದು 20 ಎಕರೆ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದಾರೆ. ಅವರಿಗೆ ತೋಟಗಾರಿಕಾ ಇಲಾಖೆಯಿಂದ ಸೂಕ್ತ ಮಾಹಿತಿ ಜೊತೆಗೆ ಇಲಾಖೆಯಿಂದ ನೀಡಲ್ಪಡುವ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಈ ಬಾರಿ ಉತ್ತಮ ಇಳುವರಿ ನಿರೀಕ್ಷೆಯಿದೆ.