• Slide
  Slide
  Slide
  previous arrow
  next arrow
 • ಫ್ರುಟ್ಸ್ ಮೂಲಕ ಕೃಷಿ ಸಾಲ ವಿತರಣೆಗೆ ಸರ್ಕಾರದ ಆದೇಶ ಕೈ ಬಿಡುವಂತೆ ಆಗ್ರಹ

  300x250 AD

  ಶಿರಸಿ: ರಾಜ್ಯ ಸರ್ಕಾರವು ನೂತನವಾಗಿ ಪರಿಚಯಿಸಿದ FRUITS(Farmer Registration and Unified Beneficiary Information System) ತಂತ್ರಾಂಶದ ಮೂಲಕವೇ ಎಲ್ಲಾ ಕೃಷಿ ಸಾಲ ಪೂರೈಸುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯಲ್ಲಿ ಅನೇಕ ಗೊಂದಲ ಹಾಗೂ ಸಮಸ್ಯೆಗಳಿರುವುದರಿಂದ ಸರ್ಕಾರ ಈ ಆದೇಶವನ್ನು ಕೈಬಿಡುವಂತೆ ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ಆಗ್ರಹಿಸಿದೆ.

  ಇಂದು ಇಲ್ಲಿನ ಟಿ ಆರ್ ಸಿ ಸಭಾಭವನದಲ್ಲಿ ಉ.ಕ. ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಅವರ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಆಗ್ರಹ ವ್ಯಕ್ತಗೊಂಡಿದೆ.

  ರಾಜ್ಯ ಸರ್ಕಾರದ ಆದೇಶದ ಪ್ರಕಾರ (ಆದೇಶ ಸಂಖ್ಯೆ CO/204/CLS/2021, ದಿನಾಂಕ 08-10-2021) ಸಹಕಾರ ಸಂಘಗಳಿಂದ ರೈತರಿಗೆ ಕೃಷಿ ಸಾಲ ವಿತರಿಸಲು ಕಡ್ಡಾಯವಾಗಿ FRUITS ತಂತ್ರಾಂಶ ಬಳಸಬೇಕಿದೆ. ಕೃಷಿ ಸಾಲದ ಎಲ್ಲಾ ಮಾಹಿತಿಗಳನ್ನು ಹಾಗೂ ಬಡ್ಡಿ ರಿಯಾಯಿತಿ ಕ್ಲೇಂಗಳನ್ನು ಈ ತಂತ್ರಾಂಶದಲ್ಲಿ ನೊಂದಾಯಿಸಬೇಕಿರುತ್ತದೆ. FRUITS ತಂತ್ರಾಂಶವನ್ನು ಭೂಮಿ ಮತ್ತು ಕಾವೇರಿ (ನೊಂದಣಿ) ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದ್ದು, ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ಕೃಷಿ ಸಾಲಗಳನ್ನು ವಿತರಿಸಲು ಹಾಗೂ ಕೃಷಿ ಸಾಲದ ಮೇಲಿನ ಋಣಗಳನ್ನು ಸೃಜಿಸಿ ಪಹಣಿಯಲ್ಲಿ ದಾಖಲು ಮಾಡಲು ಪ್ರತ್ಯೇಕ FRUITS Bank web ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

  ಈ ಬಗ್ಗೆ ಕೆ.ಡಿ.ಸಿ.ಸಿ ಬ್ಯಾಂಕು ಸಹ ಜಿಲ್ಲೆಯ ಎಲ್ಲಾ ಪ್ರಾಥಮಿಕ ಸಹಕಾರ ಸಂಘಗಳಿಗೆ ಸುತ್ತೋಲೆ ಹೊರಡಿಸಿ FRUITS ತಂತ್ರಾಂಶವನ್ನು ಬಳಸಿ ಕೃಷಿ ಸಾಲ ನೀಡುವ ಬಗ್ಗೆ ಕ್ರಮವಹಿಸುವಂತೆ ಸೂಚಿಸಿದೆ.

  ಸರ್ಕಾರ ಜಾರಿಗೊಳಿಸಿದ FRUITS ತಂತ್ರಾಂಶದ ಮೂಲಕ ರೈತರಿಗೆ ಕೃಷಿ ಸಾಲ ವಿತರಿಸುವಾಗ ವಾಸ್ತವವಾಗಿ ಅನೇಕ ಸಮಸ್ಯೆಗಳು, ಗೊಂದಲಗಳು ಉಂಟಾಗುತ್ತಿದೆ.

  ಪ್ರಮುಖವಾಗಿ FRUITS ತಂತ್ರಾಂಶವನ್ನು ಕಾವೇರಿ ಹಾಗೂ ಭೂಮಿ ತಂತ್ರಾಂಶದೊಂದಿಗೆ ಲಿಂಕ್ ಮಾಡಿರುವ ಕಾರಣದಿಂದಾಗಿ ತಂತ್ರಾಂಶಗಳು ಲಿಂಕ್ ಆಗಿ ಖಾತೆ ಅಪ್ ಲೋಡ್ ಆಗುವಲ್ಲಿ ಬಹಳ ಸಮಯ ತೆಗೆದುಕೊಳ್ಳುತ್ತದೆ. ಹಂಗಾಮಿನಲ್ಲಿ ಎಲ್ಲ ರೈತರು ಒಮ್ಮೆಲೆ ಬೆಳೆಸಾಲ ಪಡೆಯುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲ ವಿತರಿಸುವ ಸಂಸ್ಥೆಗಳಿಗೆ ಇದು ದೊಡ್ಡ ತೊಂದರೆಯಾಗಿ ಪರಿಣಮಿಸಿದೆ.

  ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು FRUITS portal ಮೂಲಕ ಆನ್ ಲೈನ್‍ನಲ್ಲಿ ಕಳುಹಿಸಿದ ಸಾಲಗಳ ಮೇಲೆ ನೋಂದಣಿ ಕಚೇರಿಯಲ್ಲಿ ಋಣವನ್ನು ಸೃಜಿಸಿ ಪಹಣಿಯಲ್ಲಿ ಭೋಜಾ ದಾಖಲಿಸಲು ವಿವರಗಳನ್ನು ಭೂಮಿ ತಂತ್ರಾಂಶಕ್ಕೆ ಒದಗಿಸಿ ಎಲ್ಲಾ ಪ್ರಕ್ರಿಯೆಗಳನ್ನು FRUITS ತಂತ್ರಾಂಶಕ್ಕೆ ಹಿಂದಿರುಗಿಸುವ ಪ್ರಕ್ರಿಯೆಯಲ್ಲಿ ಪ್ರತೀ ವರ್ಷವೂ ಸಹ ಬೆಳೆಸಾಲ ಪಡೆದಾಗ ಬೋಜಾ ದಾಖಲಿಸುವುದು ಹಾಗೂ ಸಾಲ ಮರುಪಾವತಿಗೊಂಡ ನಂತರ ಭೋಜಾ ತೆಗೆಯಬೇಕಿದೆ. ಕೆಲಸದ ಪುನರಾವರ್ತನೆಯಾಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲ ನೀಡುವ ಸಂಸ್ಥೆಗಳಿಗೆ ವರ್ಷಪೂರ್ತಿ ಇದೇ ಕೆಲಸವಾಗಲಿದೆ.

  ಅಲ್ಲದೇ ರೈತರು ಕೃಷಿಯೇತರ ಸಾಲಗಳನ್ನು ಪಡೆಯುವ ಸಂದರ್ಭದಲ್ಲಿ Motrgage Deed ಮಾಡಬೇಕಾದ ಸಂದರ್ಭ ಎದುರಾಗಿದೆ. ಬೊಜಾ ಸೃಜಿಸುವ ಹಂತದಲ್ಲಿRelease deed ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಗೆ ರೈತರು ಸ್ಟಾಂಪ್ ಡ್ಯೂಟಿ ಪಾವತಿಸಬೇಕಾಗಿರುವುದರಿಂದ ರೈತರಿಗೆ ಹೆಚ್ಚಿನ ಹಣಕಾಸಿನ ಹೊರೆ ಬೀಳಲಿದೆ.

  300x250 AD

  ಹಣಕಾಸು ಸಂಸ್ಥೆಯು ವಿತರಿಸಿದ ಸಾಲಗಳ ವಿವರಗಳನ್ನು ವಿದ್ಯುನ್ಮಾನವಾಗಿ FRUITS portal ಮುಖಾಂತರ ಪ್ಯಾಕ್ಸ್ ಗಳು ಸಂಸ್ಥೆಯ ಅಧಿಕಾರಿಯ ಡಿಜಿಟಲ್ ಸಹಿಯುಳ್ಳ ಹಾಗೂ ರೈತರ e-sign ಉಳ್ಳ ಘೋಷಣಾ ಪತ್ರದೊಂದಿಗೆ ಫೈಲಿಂಗ್ ಮಾಡಬೇಕಾಗಿರುವುದರಿಂದ ರೈತನ ಆಧಾರ್ ಕಾರ್ಡ್‍ಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಇರಬೇಕಿರುತ್ತದೆ. ಲಿಂಕ್ ಇಲ್ಲದ ಸಂದರ್ಭಗಳಲ್ಲಿ ಸಾಲ ವಿತರಿಸಲು ಓ.ಟಿ.ಪಿ ಲಭ್ಯವಾಗುವುದಿಲ್ಲ. ಅಲ್ಲದೆ ವಯೋವೃದ್ಧ ರೈತರ ಬೆರಳಚ್ಚು ಮೂಡದಿದ್ದ ಸಂದರ್ಭದಲ್ಲಿ e-sign ಮಾಡುವಲ್ಲಿ ಮತ್ತಷ್ಟು ಸಮಸ್ಯೆ ಉಂಟಾಗಲಿವೆ.

  ಇದಲ್ಲದೆ FRUITS portal ನಲ್ಲಿ ತೋರಿಸುವ ರೈತರ ಕ್ಷೇತ್ರ, ಬೆಳೆವಿವರ, ಹೆಸರು ಇವೆಲ್ಲವೂ ಸಹ ವ್ಯತ್ಯಾಸದಿಂದ ಕೂಡಿದ್ದು ಪಹಣಿಯಲ್ಲಿ ವ್ಯಕ್ತವಾದ ಅಂಶಗಳಿಗೆ ತಾಳೆಯೇ ಇಲ್ಲದಂತಾಗಿದೆ.

  ಒಂದು ಪಹಣಿಯಲ್ಲಿ 10 ಕ್ಕಿಂತ ಹೆಚ್ಚಿನ ಖಾತೆದಾರರ ಹೆಸರು ಜಂಟಿಯಾಗಿ ಇದ್ದಲ್ಲಿ ಈ ತಂತ್ರಾಂಶ ಅಪ್ಲೋಡ್ ಮಾಡುವಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ಒಕ್ಕೂಟದ ಸಭೆಯಲ್ಲಿ ಅಭಿಪ್ರಾಯಿಸಲಾಯಿತು. ಈ ತಂತ್ರಾಂಶದಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ ಬಗೆಹರಿಸದೆ ಸಾಲ ವಿತರಣೆಗೆ FRUITS ತಂತ್ರಾಂಶವನ್ನು 2022-23ನೇ ಆರ್ಥಿಕ ವರ್ಷದಲ್ಲಿ ಕಡ್ಡಾಯವಾಗಿ ಅನುಸರಿಸುವ ಕ್ರಮವನ್ನು ಕೈಬಿಟ್ಟು, ತಂತ್ರಾಂಶವನ್ನು ಸರಳೀಕರಣಗೊಳಿಸಲು ವಿಧಾನಸಬಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರಿಗೆ, ಸಹಕಾರ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಅವರಿಗೆ ಪ್ರಸ್ತಾವನೆಯೊಂದಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

  ಪ್ರಸ್ತುತ ಬಿಡುಗಡೆಯಾದ ಸನ್ 2020-21ನೇ ಸಾಲಿನ ಪ್ರಧಾನಮಂತ್ರಿ ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯ ಪರಿಹಾರ ದೊರಕುವಲ್ಲಿ ಸಹ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ಕೆ.ಎಸ್.ಎನ್.ಡಿ.ಎಮ್.ಸಿ ಸಂಸ್ಥೆ ಮಳೆ ಹಾಗೂ ಉಷ್ಣತೆಯ ವಿವರಗಳನ್ನು ಮೊದಲಿನಂತೆಯೇ ಎಲ್ಲರಿಗೂ ಸಿಗುವ ರೀತಿಯಲ್ಲಿ ಸಂಸ್ಥೆಯ ವೆಬ್ ಸೈಟ್‍ನಲ್ಲಿ ಪ್ರಕಟಿಸುವಂತೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
  ಅಲ್ಲದೆ ಕೃಷಿ ಸಾಲ ನೀಡುವ ಸಂದರ್ಭದಲ್ಲಿ ರೈತರ ಆಧಾರ್ ಕಾರ್ಡನ್ನು ಅವರ ವಾಸ್ತವ್ಯದ ವಿಳಾಸವನ್ನಾಗಿ ಪರಿಗಣಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ವಾಸ್ತವ್ಯ ವಿಳಾಸಕ್ಕೆ ಆಧಾರ್ ಪರಿಗಣನೆಯ ಬದಲಾಗಿ ಆಯಾ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಹೊಂದಿರುವ ಕೃಷಿ ಕ್ಷೇತ್ರವನ್ನೇ ಆಧಾರವಾಗಿ ಸಾಲ ನೀಡಿಕೆಗೆ ಪರಿಗಣಿಸಲು ಸಭೆಯಲ್ಲಿ ಆಗ್ರಹಿಸಲಾಯಿತು.

  ವೇದಿಕೆಯಲ್ಲಿ ಕೃಷಿ, ಕೃಷಿಕ, ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಹಾಗೂ ತ್ಯಾಗಲಿ ಸೊಸೈಟಿ ಅಧ್ಯಕ್ಷರಾದ ಎನ್.ಬಿ. ಹೆಗಡೆ, ಮತ್ತೀಹಳ್ಳಿ, ಟಿಆರ್ ಸಿ ನಿರ್ದೇಶಕರಾದ ಜಿ.ವಿ. ಜೋಶಿ, ಕಾಗೇರಿ, ವಾನಳ್ಳಿ ಸೊಸೈಟಿ ಅಧ್ಯಕ್ಷರಾದ ಎನ್.ಎಸ್. ಹೆಗಡೆ, ಕೋಟಿಕೊಪ್ಪ ಉಪಸ್ಥಿತರಿದ್ದರು.

  ಉ.ಕ. ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top