ಶಿರಸಿ: ತಾಲೂಕಿನ ಹೆಗಡೆಕಟ್ಟಾ ಬಳಿಯ ಗೊಡ್ವೆಮನೆ ವಿಘ್ನೇಶ್ವರ ಹೆಗಡೆ ಅವರ ತೋಟದಲ್ಲಿ ಟಿಎಂಎಸ್ ಶಿರಸಿ ಮತ್ತು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಬನ್ ಫೈಬರ್ ದೋಟಿಯಲ್ಲಿ ಎರಡು ದಿನಗಳ ಕೊನೆ ಕೊಯ್ಲು ತರಬೇತಿ ಶಿಬಿರ ನಡೆಯಿತು. ಹೆಗಡೆಕಟ್ಟಾ ಭಾಗದ ದೋಟಿಯಲ್ಲಿ ಕೊನೆ ಕೊಯ್ಲು ಮಾಡಲು ಆಸಕ್ತ ಕುಶಲಕರ್ಮಿಗಳು ತರಬೇತಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಹೆಗಡೆಕಟ್ಟಾ ಭಾಗದ 11 ಜನ ರೈತರು ತರಬೇತಿ ಶಿಬಿರದಲ್ಲಿ ಭಾಗವಹಿಸಿ ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆ ಕೊಯ್ಯುವ ತಾಂತ್ರಿಕತೆಯನ್ನು ಕಲಿತುಕೊಂಡರು.
ತರಬೇತಿ ಪಡೆದ ರೈತರಿಗೆ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ತರಬೇತಿಯ ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ ಪಿ ಹೆಗಡೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಅವಘಡಗಳನ್ನು ಗಮನಿಸಿದರೆ, ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆ ಕೊಯ್ಯುವುದು ಹೆಚ್ಚು ಸುಲಭ ಮತ್ತು ಇದರಿಂದ ಆಗತಕ್ಕ ಅನಾಹುತಗಳಿಗೆ ವಿರಾಮ ನೀಡಬಹುದು. ಟಿಎಂಎಸ್ ಈ ನಿಟ್ಟಿನಲ್ಲಿ ಎಲ್ಲಾ ಭಾಗದ ರೈತರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳುತ್ತಿರುವದು ಸಂತಸ ತಂದಿದೆ ಮುಂದೊಂದು ದಿನ ಬಹಳಷ್ಟು ಜನರು ಇದೇ ಮಾರ್ಗವನ್ನು ಅನುಸರಿಸಬಹುದು ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ತರಬೇತಿ ಪಡೆದವರು ಇದ್ದಲ್ಲಿ ಕೆಲಸ ಸುಲಭವಾಗುತ್ತದೆ ಎಂದರು.
ತೀವ್ರ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಚೆಕ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಚಿಂಚಳಿಕೆ, ಕಾನಳ್ಳಿ ಭಾಗದ ಸದಸ್ಯ ರೈತರಿಗೆ ಕಳೆದ ವರ್ಷ ತೀವ್ರ ಮಳೆಯಿಂದ ಆದ ಹಾನಿಗೆ ಪರಿಹಾರದ ಚೆಕ್ ಅನ್ನು ಸಂಘದ ವ್ಯಾಪ್ತಿಗೆ ಒಳಪಟ್ಟು ನೀಡಲಾಯಿತು. ಹಾನಿಗೊಳಗಾದ ಸಂತ್ರಸ್ತರು ಈ ಸಂದರ್ಭದಲ್ಲಿ ಪರಿಹಾರದ ಚೆಕ್ ಅನ್ನು ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಗಳಿಂದ ಪಡೆದುಕೊಂಡರು.
ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ನಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ನಮ್ಮ ನಿಯಮಕ್ಕೆ ಒಳಪಟ್ಟು ನಾವು ಪರಿಹಾರದ ಚೆಕ್ ಅನ್ನು ವಿತರಿಸಿದ್ದೇವೆ ಸದಸ್ಯ ರೈತರ ಹಿತ ಕಾಯುವಲ್ಲಿ ಸಂಘದ ವತಿಯಿಂದ ರೈತರಿಗೆ ಪರಿಹಾರ ಧನವನ್ನು ನೀಡಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಟಿಎಂಎಸ್ ಕೃಷಿ ವಿಭಾಗದ ಮುಖ್ಯಸ್ಥ ನಾಗರಾಜ ಹೆಗಡೆ ಹಾಗೂ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಪ್ರಭಾಕರ ಹೆಗಡೆ, ಸುಬ್ರಾಯ ಹೆಗಡೆ, ಎಂ.ಆರ್.ಹೆಗಡೆ, ವನಿತಾ ಹೆಗಡೆ, ಪ್ರಸನ್ನ ಭಟ್ಟ, ಈರು ಗೌಡ, ಮಂಜುನಾಥ ನಾಯ್ಕ ಇತರರು ಉಪಸ್ಥಿತರಿದ್ದರು.