ಹೊನ್ನಾವರ : ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ 73 ನೇ ಸಂವಿಧಾನೋತ್ಸವದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಫೋಟೋ ತೆಗೆದರೆ ಮಾತ್ರ ನಾನು ಧ್ವಜಾರೋಹಣ ಮಾಡುತ್ತೇನೆ ಎಂದು ಹೇಳಿ ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾ ಗೊಳಿಸುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೊನ್ನಾವರ ತಾಲೂಕಾ ಸಮಿತಿ ವತಿಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ, ಹೊನ್ನಾವರ ತಾಲೂಕು ಸಮಿತಿ ಹಾಗೂ ಹೊನ್ನಾವರ ತಾಲೂಕ ಮಹಿಳಾ ಘಟಕದಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ದಲಿತಪರ ಸಂಘಟನೆಗಳ ಹೋರಾಟಗಳ ಮೂಲಕ ಪಟ್ಟಣ ಶರಾವತಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾ ನ್ಯಾಯಾಧೀಶರ ವಿರುದ್ದ ಧಿಕ್ಕಾರ ಕೂಗಿದರು.ರಾಷ್ಟ್ರೀಯ ಹೆದ್ದಾರಿಯ ಮೂಲಕ ತಹಶಿಲ್ದಾರರ ಕಚೇರಿ ಆವಾರದಲ್ಲಿ ಪ್ರತಿಭಟನೆ ಮುಕ್ತಾಯಗೊಳಿಸಿದರು.
ಸಂವಿಧಾನದ ಶಿಲ್ಪಿ ಅಂಬೇಡ್ಕರ್ ರವರನ್ನು ಗೌರವಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಉದ್ದಗಲಕ್ಕೂ 73ನೇಯ ಸಂವಿಧಾನೋತ್ಸವ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ರಾಯಚೂರಿನ ಜಿಲ್ಲಾ ನ್ಯಾಯಾಧೀಶರು ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಧಿಕ್ಕರಿಸಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆಂಬ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸಂವಿಧಾನದ ಅಡಿಯಲ್ಲಿಯೇ ನ್ಯಾಯಾಧೀಶರಾಗಿ ಸ್ಥಾನ ಪಡೆದು ಮತ್ತು ಸಂವಿಧಾನದ ಅಡಿಯಲ್ಲಿ ನ್ಯಾಯದಾನ ಮಾಡುವ ನ್ಯಾಯಾಧೀಶರೇ ಅವಿಧ್ಯಾವಂತನಂತೆ ನಡೆದುಕೊಂಡು ನ್ಯಾಯಾಂಗದ ಭದ್ರ ಬುನಾದಿಯಾದ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ರವರನ್ನು ಜಿಲ್ಲಾ ನ್ಯಾಯಾಧೀಶರಾದ ಮಲ್ಲಕಾರ್ಜುನ ಗೌಡ ರವರು ಅಪಮಾನಿಸಿದ್ದಾರೆ.
ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಇದು ಅಕ್ಷಮ್ಯ ಅಪರಾಧ ಅಲ್ಲದೇ ನ್ಯಾಯಾಧೀಶರೋಬ್ಬರು ಸಂವಿಧಾನ ಹಾಗೂ ಅದರ ರುವಾರಿಯಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ರವರ ಬಗ್ಗೆ ಇಷ್ಟೊಂದು ಪೂರ್ವಗ್ರಹವಾಗಿ ನಿಲುವು ಇಟ್ಟುಕೊಂಡರೆ ಅವರಿಂದ ನಿಷ್ಪಕ್ಷಪಾತ ನ್ಯಾಯಾದಾನ ನೀರಿಕ್ಷಿಸಲು ಸಾಧ್ಯವೇ? ವಿಶ್ವಸಂಸ್ಥೆಯು ಅಂಬೇಡ್ಕರ್ ರವರ ಜ್ಞಾನಕ್ಕೆ ಗೌರವಿಸಿ ಅವರ ಹುಟ್ಟಿದ ದಿನವನ್ನು ಜ್ಞಾನದ ದಿನವಾಗಿ ಆಚರಿಸುತ್ತದೆ, ಆದರೆ ಇಲ್ಲಿ ಅಗೌರವಿಸಲಾಗಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ನ್ಯಾಯಾಲಯದ ಮೇಲೆ ನಾಗರಿಕ ಸಮಾಜ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನ ರಚನೆಗೆ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಅಂಬೇಡ್ಕರ್ ರವರ ಘನತೆಯನ್ನು ಎತ್ತಿ ಹಿಡಿಯಲು ರಾಜ್ಯ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದು ಮಲ್ಲಕಾರ್ಜುನಗೌಡ ನ್ಯಾಯಾಧೀಶರನ್ನು “ನ್ಯಾಯಾಧೀಶರ ವಿಚಾರಣಾ ಕಾಯಿದೆ 1968” ಮತ್ತು “ನ್ಯಾಯಾಧೀಶರ ವಿಚಾರಣೆ ಅಧೀನಯಮ 1969” ರ ನಿಯಮಗಳ ಅನುಸಾರ “ಅಸಮರ್ಥತೆ ಮತ್ತು ಅನುಚಿತ ವರ್ತನೆ” ಆಧಾರದಲ್ಲಿ ಅವರನ್ನು ನ್ಯಾಯಾಧೀಶರ ಹುದ್ದೆಯಿಂದ ವಜಾಮಾಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ತಹಶಿಲ್ದಾರರ ನಾಗರಾಜ ನಾಯ್ಕಡ್ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕಾ ಸಂಚಾಲಕ ಎಚ್ ಪ್ರಭುಕುಮಾರ್ ಮಾತನಾಡಿ ಸಂವಿಧಾನ ಎಲ್ಲರಿಗು ಸಮಾನತಯೆ ಹಕ್ಕು ನೀಡಿದೆ. ವಿಪರ್ಯಾಸವೆಂದರೆ ನ್ಯಾಯ ನೀಡಬೇಕಾದವರೆ ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ. ಇದು ನಮಗೆಲ್ಲಾ ನೋವು ತಂದಿದೆ. ಇಂತವರು ದಲಿತಪರ ನ್ಯಾಯ ನೀಡುವಲ್ಲಿ ದುರುಪಯೋಗವಾಗಿರವಹುದೆಂಬ ಅನುಮಾನವಿದೆ. ಇಂತಹ ಘಟನೆ ಮರುಕಳಿಸಬಾರದು ಎಂದರು.
ತಾಲೂಕಾ ಪ್ರಧಾನ ಕಾರ್ಯದರ್ಶಿ ಜಿ.ಟಿ ಹಳ್ಳೆರ್ ಮಾತನಾಡಿ, ಇದು ಅಂಬೇಡ್ಕರ್ ಅವರಿಗೆ,ಭಾರತದ ಸಂವಿಧಾನಕ್ಕೆ ತೋರಿದ ಅಗೌರವ, ಅಪಮಾನವಾಗಿದೆ. ಸಂವಿಧಾನದಂತಹ ಶ್ರೇಷ್ಠ ಗ್ರಂಥದಲ್ಲಿ ಓದಿದವರು ಅವಿದ್ಯಾವಂತರಂತೆ ವರ್ತಿಸಿದ್ದಾರೆ. ಬಡವರಿಗೆ,ದೀನ ದಲಿತರಿಗೆ ನ್ಯಾಯ ನೀಡಬೇಕಾದವರು ಕೃತ್ಯ ಖಂಡನೀಯ ಎಂದರು.
ಸಮಿತಿಯ ತಾಲೂಕಾ ಸಂಘಟಕರು ಹಾಗೂ ಕರ್ಕಿ ಗ್ರಾಮ ಪಂಚಾಯತ ಸದಸ್ಯರಾದ ಕಮಲಾಕರ ಮುಕ್ರಿ ಮಾತನಾಡಿ, ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರು ಕಪ್ಪು ಕೋಟು ಧರಿಸಿ ನ್ಯಾಯ ನೀಡುವ ಹಕ್ಕು ಹೊಂದಿದ್ದಾರೆ ಎಂದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ವರು ಹಾಗೂ ಸಂವಿಧಾನ ಕಾರಣ . ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಇವರೇ ಹೀಗೆ ವರ್ತಿಸಿದರೆ ಜನಸಾಮಾನ್ಯರ ಗತಿಯೇನು? ಇಂತಹ ದಲಿತ ವಿರೋಧಿ ನ್ಯಾಯಾಧೀಶರನ್ನು ಖಂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ಎನ್ ಹಳ್ಳೇರ್, ತಾಲೂಕಾ ಕಾರ್ಯದರ್ಶಿ ಕೃಷ್ಣಾನಂದ ಹುಲಸ್ವಾರ,ಖಜಾಂಚಿ ಮಂಜುನಾಥ ಜಿ ಹಳ್ಳೇರ್, ತಾಲೂಕಾ ಸಂಘಟಕರಾದ ಬಾಬು ಹಳ್ಳೇರ್, ರವಿ ಹಳ್ಳೇರ್,ಗಿರಿಜಾ ಹಳ್ಳೇರ್ , ಮಾರಿಕಾಂಬ ಮಹಿಳಾ ಸಂಘದ ಈರಮ್ಮ ಹಳ್ಳೇರ್, ವಿರಾಂಜನೇಯ ಸಂಘದ ಅಣ್ಣಪ್ಪ ಹಳ್ಳೇರ್,ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಮಾಸ್ತಿ ಹಳ್ಳೇರ್ ಮತ್ತಿತರಿದ್ದರು.