ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಮಂಗಳವಾರ ಆಚರಿಸಲಾದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‍ರವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಸರಳವಾಗಿ ಆಚರಿಸಲಾಯಿತು.
ಬಳಿಕ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ ಮಹಾಪುರುಷರಿಗೆ ದೈವತ್ವದ ಹಿನ್ನೆಲೆಯನ್ನು ಕೊಡುವುದು ನಮ್ಮ ಪರಂಪರೆ, ಅಂತಹ ಪರಂಪರೆ ಇತಿಹಾಸ ಹೊಂದಿದಂತಹ ಶಿವಶರಣರಲ್ಲಿ ಮಡಿವಾಳ ಮಾಚಿದೇವ ಪ್ರಮುಖರು ಎಂದು ಹೇಳಿದರು.
12ನೇ ಶತಮಾನದ ಶಿವಶರಣರಲ್ಲಿ ಮಡಿವಾಳ ಮಾಚಿದೇವರು ಸಹ ಪ್ರಮುಖರಾಗಿದ್ದಾರೆ. ನೈಜ ಭಕ್ತಿಯ ಕುರಿತಾದ ಅವರ ನುಡಿಗಳು ನಮ್ಮೆಲ್ಲರಿಗೂ ಇಂದು ಭಕ್ತಿಯ ಮಾರ್ಗವನ್ನು ತಿಳಿಸಿಕೊಡುತ್ತವೆ ಎಂದರು. ಮಹಾನ್ ದೈವಭಕ್ತರಾಗಿಯೂ ಸಹ ಆಸ್ತಿಕತೆಗಿಂತ ನಾಸ್ತಿಕತೆಗೆ ಮಹತ್ವ ನೀಡಿದ ಅವರು ಎಲ್ಲೋ ಇರುವ ದೇವರನ್ನು ಹುಡುಕುವ ಬದಲಾಗಿ ನಿಮ್ಮೊಳಗಿರುವ ಆತ್ಮಶುದ್ಧತೆ, ದಯವೆಂಬ ದೇವರನ್ನು ಪೂಜಿಸಿದರೆ ದೇವರು ಮೆಚ್ಚುವನು ಎಂದು ಹೇಳಿದ್ದಾರೆಂದು ತಿಳಿಸಿದರು.
ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೊಡ ಮಾತನಾಡಿ, ಮಡಿವಾಳ ಮಾಚಿದೇವರು ನೈಜ ಶಿವಶರಣ ಹಾಗೂ ನೇರ ನಿಷ್ಠುರ ನಡೆಯ ವ್ಯಕ್ತಿತ್ವದ ಶಿವಭಕ್ತನಾಗಿದ್ದರು. ಅಂತಹ ಶರಣರ ಆದರ್ಶವನ್ನು ನಾವು ಬೆಳಿಸಿಕೊಳ್ಳೋಣ ಸಮಾಜಕ್ಕೆ ಒಳ್ಳೆಯದನ್ನು ಮಾಡೋಣ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ನಾಯ್ಕ್, ಮಡಿವಾಳ ಸಮುದಾಯದ ಮುಖಂಡರು, ಜಿಲ್ಲಾಧಿಕಾರಿ ಕಚೇರಿಯ ವಿವಿಧ ಶಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.