
ಕುಮಟಾ: ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಲೂಕಿಗೆ ಆಗಮಿಸಿದ ವಿಧಾನ ಪರಿಷತ್ತಿನ ಸದಸ್ಯ ಹಾಗೂ ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮದ ರಾಜ್ಯ ಉಸ್ತುವಾರಿ ಬಿ.ಕೆ.ಹರಿಪ್ರಸಾದ ಅವರು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿಯವರೊಂದಿಗೆ ತೆರಳಿ, ಕೊರೊನಾದಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಕೊರೊನಾ ಸೋಂಕಿನಿಂದ ಮೃತಪಟ್ಟ ಕಾಂಗ್ರೆಸ್ ಪಕ್ಷದ ಪ್ರಮುಖರಾದ ತಾಲೂಕಿನ ಮಂಜುನಾಥ ಗೌಡ, ಮನೋಜ ನಾಯ್ಕ ಹಾಗೂ ವಾಸುದೇವ ಶೆಟ್ಟಿಯವರ ಮನೆಗೆ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ, ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ತಿಳಿಸಿದರು.
ನಂತರ ಮಾತನಾಡಿದ ಅವರು, ಕೊರೊನಾದಿಂದ ಜೀವ ಕಳೆದುಕೊಂಡವರಿಗೆ ಸಾಂಪ್ರದಾಯಿಕವಾಗಿ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡದ ಸರ್ಕಾರದ ಧೋರಣೆ ಪ್ರಶ್ನಾತೀತ. ಏಳು ದಿನಗಳ ಕಾಲ ಶವ ಸಂಸ್ಕಾರಕ್ಕಾಗಿ ಕಾಯುವ ದುಃಸ್ಥಿತಿ ಎದುರಾಗಿದೆ. ಇದೊಂದು ಅಮಾನವೀಯ ಸನ್ನಿವೇಷವಾಗಿದೆ. ಇಂಥ ಕಠೋರ ಪರಿಸ್ಥಿತಿಯಲ್ಲಿ ನೊಂದ ಜನರಿಗೆ ಸರ್ಕಾರ ಸೌಜನ್ಯಕ್ಕೂ ಸಾಂತ್ವನ ಹೇಳಿಲ್ಲ ಎಂದ ಅವರು, ದೇಶವನ್ನು ಕೊರೊನಾ ಮುಕ್ತಗೊಳಿಸುವುದೇ ಕಾಂಗ್ರೆಸ್‍ನ ಮೂಲ ಉದ್ದೇಶವಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಮನೆ ಮನೆಗೆ ಸಹಾಯ ಹಸ್ತ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಮುಖಂಡರಾದ ವಿ.ಎಸ್.ಆರಾಧ್ಯ, ಜಿ.ಎ.ಭಾವಾ, ಸುರೇಶ್ಚಂದ್ರ ಶೆಟ್ಟಿ, ಅಬ್ದುಲ ಮಜೀದ, ರವಿಕುಮಾರ ಶೆಟ್ಟಿ, ಸುರೇಖಾ ವಾರೇಕರ, ಲಕ್ಷ್ಮೀ ಚಂದಾವರ, ಸಚಿನ ನಾಯ್ಕ, ಎಂ.ಟಿ.ನಾಯ್ಕ, ಮುಜಾಫರ ಸಾಬ, ವೀಣಾ ನಾಯಕ, ಚಂದ್ರಹಾಸ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.