ಶಿರಸಿ:ಉತ್ತರಕನ್ನಡ ಜಿಲ್ಲೆಯ ಹಿರಿಯ ಸಹಕಾರಿ ಧುರೀಣರಾಗಿದ್ದ ದಿವಸ್ಪತಿ ದೇವೇಂದ್ರ ವಿಶ್ವಾಮಿತ್ರ ಓಣಿಗದ್ದೆ (90) ಅವರು ಜ.30 ರ ರವಿವಾರ ನಿಧನರಾದರು.
ಇವರು ತಮ್ಮ 27ನೇ ವಯಸ್ಸಿನಲ್ಲಿಯೇ ಟಿಎಸ್‍ಎಸ್‍ನ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿದ್ದರು. 1975-84, 1987-93 ರ ಅವಧಿಗೆ ಶಿರಸಿ ಟಿಎಸ್‍ಎಸ್‍ನ ಅಧ್ಯಕ್ಷರಾಗಿ, 1971 ರಿಂದ 2005ರವರೆಗೆ ವಿವಿಧ ಅವಧಿಗೆ ಟಿಆರ್‍ಸಿ ಅಧ್ಯಕ್ಷರಾಗಿ, 1994 ರಿಂದ 2001ರವರೆಗೆ ಶಿರಸಿ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷರಾಗಿ, 1977ರಿಂದ 1993ರವರೆಗೆ ಕ್ಯಾಂಪ್ಕೋ ಮಂಗಳೂರು ನಿರ್ದೇಶಕರಾಗಿ, ದೆಹಲಿಯ ಇಫ್ಕೋ ಸಂಸ್ಥೆ, ಶಿರಸಿ ಎಪಿಎಂಸಿ ನಿರ್ದೇಶಕರಾಗಿ ಹಾಗೂ ಅಂದು ಟಿಆರ್‍ಸಿ ನೇತೃತ್ವದಲ್ಲಿದ್ದ ಪ್ರೊಸೆಸಿಂಗ್ ಸೊಸೈಟಿ, ಭೂ ಅಭಿವೃದ್ಧಿ ಬ್ಯಾಂಕ್, ಜನತಾ ಬಜಾರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಆಡಳಿತ ಸೇವೆ ನೀಡುವ ಮೂಲಕ ಉತ್ತರಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ಡಿ.ಡಿ.ವಿಶ್ವಾಮಿತ್ರ ಅವರು ಮಹತ್ತರ ಪಾತ್ರ ವಹಿಸಿದ್ದರು. ಅವರ ಶಿಕ್ಷಣ, ನಡವಳಿಕೆ, ಅಪಾರ ಅನುಭವ ಅವರಿಗೆ ಹಾಗೂ ಅವರ ಆಡಳಿತದಲ್ಲಿದ್ದ ಸಂಸ್ಥೆಗೆ ಬಹುಬೇಗ ಯಶಸ್ಸುಗಳಿಸಲು, ಸಹಕಾರಿಯಾಯಿತು.
ಮೃತರು ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧುಬಳಗ ಅಗಲಿದ್ದಾರೆ.
ಸಂತಾಪ: ಸಹಕಾರಿ ರಂಗದ ದಿಗ್ಗಜರೆನಿಸಿದ ದಿವಸ್ಪತಿ ದೇವೇಂದ್ರ ವಿಶ್ವಾಮಿತ್ರ ಅವರ ನಿಧನಕ್ಕೆ ಟಿಎಸ್‍ಎಸ್ ಕಾರ್ಯಾಧ್ಯಕ್ಷ, ಟಿಆರ್‍ಸಿ ಅಧ್ಯಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರು ಜಿಲ್ಲೆಯ ಸಹಕಾರಿ ಕ್ಷೇತ್ರದ ಏಳ್ಗೆಗಾಗಿ ಅದರ ಸದಸ್ಯರ ಒಳಿತಿಗಾಗಿ ಶ್ರಮ ವಹಿಸಿದ್ದರು. ಯಾವುದೇ ವಿಷಯವನ್ನು ಸಹ ಅವರು ಸಂಪೂರ್ಣವಾಗಿ ಅಭ್ಯಯಿಸದೇ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಸಾಧಕ ಬಾಧಕಗಳನ್ನು ಅರಿತು ತೀರ್ಮಾನಕ್ಕೆ ಬರುವ ಗುಣಹೊಂದಿದ್ದರು. ದಿ. ಶ್ರೀಪಾದ ಹೆಗಡೆ, ಕಡವೆ ಅವರ ನಿಕಟವರ್ತಿಗಳಾಗಿದ್ದ ಅವರು ಟಿಎಸ್‍ಎಸ್‍ನ ಇಂದಿನ ಈ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ರಾಮಕೃಷ್ಣ ಹೆಗಡೆ ಸ್ಮರಿಸಿದ್ದಾರೆ.
ಡಿ.ಡಿ. ವಿಶ್ವಾಮಿತ್ರ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರು ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಟಿಆರ್‍ಸಿ ಕಚೇರಿಯಲ್ಲಿ ಸಂತಾಪ ಸಭೆ ಸೇರಿ, ಮೌನಾಚಣೆ ನಡೆಸಿ ಸಂತಾಪ ಸೂಚಿಸಲಾಯಿತು.