
ಕಾರವಾರ: ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರೆದಿದ್ದು, ಸಮುದ್ರ ತೀರದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಕಾರವಾರದ ದೇವಭಾಗ, ರವೀಂದ್ರನಾಥ ಟ್ಯಾಗೋರ್ ಕಡಲತೀರ, ಹೊನ್ನಾವರದ ವಿವಿಧೆಡೆ ಕಡಲ್ಕೊರೆತ ತೀವ್ರಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಘಂಟೆಗೆ 40 ರಿಂದ 50 ಕಿಲೋಮಿಟರ್ ವೇಗದಲ್ಲಿ ಏಳುತಿದ್ದು ಇನ್ನೂ ಎರಡು ದಿನ ಬಿರುಗಾಳಿ ಸಹಿತ ಮಳೆ ಅಬ್ಬರ ಮುಂದುವರೆಯಲಿದೆ.
ಭಾರೀ ಗಾಳಿ-ಮಳೆಗೆ ಕುಮಟಾದ ಐ.ಸಿ.ಐ.ಸಿ ಬ್ಯಾಂಕ್ ಪಕ್ಕದ ಬೃಹತ್ ಆಲದ ಮರ ಇಂದು ಮಳೆಯ ಆರ್ಭಟಕ್ಕೆ ಧರೆಗುರುಳಿದೆ. ಇದರಿಂದ ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಮರ ಬಿದ್ದ ಕಾರಣ, ಯಾರಿಗೂ ಯಾವುದೇ ವಾಹನಗಳಿಗೂ ಹಾನಿಯಾಗಿಲ್ಲ. ನಂತರ ಪುರಸಭೆ ನೌಕರರು, ಅಗ್ನಿ ಶಾಮಕದಳದ ಸಿಬ್ಬಂದಿ ಮರವನ್ನು ತೆರವು ಮಾಡಿದರು.
ಜಿಲ್ಲೆಯ ಮಲೆನಾಡು ಭಾಗವಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲೂ ಮಳೆಯ ಅಬ್ಬರ ಹೆಚ್ಚಾಗಿದೆ.
ನಾಡದೋಣಿ ಮೀನುಗಾರಿಕೆಗೆ ನಿರ್ಬಂಧ: ಉಡುಪಿ ಜಿಲ್ಲೆಯಲ್ಲೂ ಸಹ ಮಳೆಯ ಆರ್ಭಟ ಹೆಚ್ಚಾಗಿದ್ದು ಏಳು ತಾಲೂಕಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ನಾಡ ದೋಣಿ ಮೀನುಗಾರಿಕೆಗೆ ಎರಡು ದಿನ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ 100 ಮಿಲೀ ಮೀಟರ್ ಗೂ ಹೆಚ್ಚು ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ.