ಕಾರವಾರ: ಸಾರ್ವಜನಿಕರ ಸಮಸ್ಯೆಗಳಿಗೆ ಎಲ್ಲ ಸ್ತರದ ಅಧಿಕಾರಿಗಳು ತಕ್ಷಣವೇ ಸಕಾರಾತ್ಮವಾಗಿ ಸ್ಪಂದಿಸಿ, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ತಿಳಿಸಿದ್ದಾರೆ.
ನಗರಸಭಾ ವ್ಯಾಪ್ತಿಯ ಕೋಡಿಭಾಗ ಖಾಪ್ರಿ ದೇವಸ್ಥಾನದ ಬಳಿಯ ತಿರುವಿನಲ್ಲಿ ನೂತನ ರಸ್ತೆ ಕಾಮಗಾರಿ ಹಾಗೂ ವಿದ್ಯುತ್ ಟ್ರಾನ್ಸ್‍ಫರ್ಮರ್ ಸ್ಥಳಾಂತರಗೊಳಿಸುವ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ, ಅವರು ಮಾತನಾಡಿದರು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ. ಅಭಿವೃದ್ಧಿಯ ನೆಪವೊಡ್ಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದರೆ ಸಹಿಸುವುದಿಲ್ಲ ಎಂದ ಅವರು, ಇಲ್ಲಿನ ಕಾಮಗಾರಿಗೆ ಶಾಸಕರ ವಿಶೇಷ ಅನುದಾನದಿಂದ 35 ಲಕ್ಷ ರೂ.ಮಂಜೂರಾಗಿದ್ದು, ಉತ್ತಮ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹೆಸ್ಕಾಂ ಇಲಾಖೆಯೂ ಸಹ ಸಾಕಷ್ಟು ಸಹಕಾರ ನೀಡಿದೆ. ಸ್ಥಳೀಯರ ನೆರವಿನಿಂದ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಇಲ್ಲಿನ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‍ಫರ್ಮರ್ ಸ್ಥಳಾಂತರಗೊಳಿಸಿ, ಸಂಚಾರ ಸಮಸ್ಯೆ ಹಾಗೂ ದೇವಸ್ಥಾನದ ಆವರಣ ಉಳಿಸುವಂತೆ ಕಮಿಟಿಯ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರು ವಿಪ ಶಾಸಕ ಉಳ್ವೇಕರ್‍ಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಉಳ್ವೇಕರ್, ನಗರಸಭೆ ಪೌರಾಯುಕ್ತ ಹಾಗೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಭಾನುವಾರವೂ ಸಹ ಕಾಮಗಾರಿಗೆ ಚಾಲನೆ ನೀಡಿ, ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ, ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಡಾ. ನಿತೀನ್ ಪಿಕಳೆ, ನಗರಸಭಾ ಸದಸ್ಯ ನಂದಾ ನಾಯ್ಕ, ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಎಸ್.ಶೇಬಣ್ಣನವರ, ವಿ.ಪ ಶಾಸಕರ ಆಪ್ತ ಕಾರ್ಯದರ್ಶಿ ಅರವಿಂದ ಗುನಗಿ, ಕಾರ್ಯನಿರ್ವಾಹಕ ಅಧಿಕಾರಿ ರೋಷನಿ ಪೆಡ್ನೇಕರ್, ಸೇರಿದಂತೆ ದೇವಸ್ಥಾನದ ಆಡಳಿತ ಕಮಿಟಿ ಸದಸ್ಯರು ಹಾಗೂ ಹಲವಾರು ಸಾರ್ವಜನಿಕರು ಇದ್ದರು.