ಕಾರವಾರ: ಜಿಲ್ಲಾ ಕೇಂದ್ರ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ನಗರಸಭೆ ಅವುಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ನಗರದ ಗ್ರೀನ್‍ಸ್ಟ್ರೀಟ್ ರೋಡ್, ಕಾಜುಭಾಗ ರಸ್ತೆ, ಮಾರುತಿ ಗಲ್ಲಿ, ಸುಭಾಸ ಸರ್ಕಲ್, ಗೀತಾಂಜಲಿ ಸರ್ಕಲ್, ಎಮ್.ಜಿ.ರೋಡ್, ಶಿರವಾಡ ರಸ್ತೆ, ಹಬ್ಬುವಾಡ, ಕೆಎಚ್‍ಬಿ ಕಾಲೋನಿ, ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ಕೆಇಬಿ ರಸ್ತೆ, ಹೈ ಚರ್ಚ್ ರಸ್ತೆ ಸೇರಿದಂತೆ ವಿವಿಧ ಪ್ರಮುಖ ಹಾಗೂ ಉಪ ರಸ್ತೆಗಳಲ್ಲಿ ಮತ್ತು ಹಲವಾರು ಹೊಟೆಲ್, ಬಾರ್, ಫಾಸ್ಟ್‍ಫುಡ್, ರೆಸ್ಟೋರೆಂಟ್, ಮೀನು ಮಾರುಕಟ್ಟೆ ಮತ್ತು ಮಾಂಸದ ಅಂಗಡಿಗಳ ಮುಂಭಾಗದಲ್ಲಿ ಗುಂಪು-ಗುಂಪಾಗಿ ಬೀದಿ ನಾಯಿಗಳ ಹಿಂಡು ಕಂಡು ಬರುತ್ತಿವೆ. ಇದರಿಂದ ವಯೋವೃದ್ಧರು, ಮಹಿಳೆಯರು ಹಾಗೂ ಮಕ್ಕಳು ವಾಯುವಿಹಾರಕ್ಕೆ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳಲು ಹಿಂದೇಟು ಹಾಕುವಂತಾಗಿದೆ.
ರಾತ್ರಿ ಸಮಯದಲ್ಲಿ ಹೆಚ್ಚಾದ ಬೀದಿ ನಾಯಿಗಳ ಉಪಟಳ:
ಹಗಲಿನ ಸಮಯದಲ್ಲಿ ಮಾತ್ರವಲ್ಲದೇ, ರಾತ್ರಿಯೂ ಸಹ ನಾಯಿಗಳ ಗುಂಪು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಮೇಲೆ ದಾಳಿ ನಡೆಸುತ್ತಿವೆ. ಅಲ್ಲದೇ, ನಗರ ಭಾಗದ ವಿವಿಧ ಗಲ್ಲಿಗಳಲ್ಲಿರುವ ನಾಯಿಗಳ ಹಿಂಡು ದ್ವಿಚಕ್ರ ವಾಹನ ಸವಾರರ ಬೆನ್ನಟ್ಟಿ, ಸಾಕಷ್ಟು ವಾಹನ ಸವಾರರು ಬಿದ್ದು, ಗಾಯಗೊಂಡಿರುವ ಘಟನೆಯೂ ನಡೆದಿದೆ.
ಜಾಗದ ಅಭಾವ-ಸ್ಥಗಿತಗೊಂಡ ಸಂತಾನ ಹರಣ ಚಿಕಿತ್ಸೆ:
ಹಲವು ವರ್ಷಗಳಿಂದ ತಾಲೂಕಿನ ಶಿರವಾಡದ ಕಸ ವಿಲೇವಾರಿ ಘಟಕದ ಬಳಿ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ, ಅಲ್ಲಿಯೇ, ಮೂರು ದಿನಗಳ ಕಾಲ ಸಂರಕ್ಷಿಸಲಾಗುತ್ತಿತ್ತು. ಆದರೆ ಈ ವರ್ಷದಿಂದ ಶಿರವಾಡದಲ್ಲಿ ಸಂತಾನಹರಣ ಕಾರ್ಯಕ್ಕೆ ಗ್ರಾಮಸ್ಥರು ತಕರಾರು ತೆಗೆದ ಪರಿಣಾಮ ಈ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ಸ್ಥಳದ ಅಭಾವದಿಂದ ಪುನಃ ಆರಂಭಗೊಂಡಿಲ್ಲ ಎಂದು ನಗರಸಭೆ ಮಾಹಿತಿ ನೀಡಿದೆ.
ಕಳೆದ ವರ್ಷ 1680 ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲಾಗಿತ್ತು. ಇದರಿಂದ ಕೆಲವು ತಿಂಗಳುಗಳ ಕಾಲ ಬೀದಿ ನಾಯಿಗಳ ಹಾವಳಿಯಿಂದ ಅಲ್ಪ ಮುಕ್ತಿ ದೊರೆತಂತಾಗಿತ್ತು. ಆದರೆ ಈ ಬಾರಿ ಕೇವಲ 180 ನಾಯಿಗಳಿಗೆ ಮಾತ್ರ ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಸದ್ಯ, ಜಾಗದ ಅಭಾವವೂ ಇದೆ. ಅಲ್ಲದೇ, ಪ್ರಾಣಿ ದಯಾ ಸಂಘದವರ ಅಡೆತಡೆ ಸೇರಿದಂತೆ ಹಲವು ಕಾರಣಗಳಿಂದ ಯೋಜಿತ ಕಾರ್ಯ ಯಶಸ್ವಿಗೊಂಡಿಲ್ಲ ಎನ್ನುತ್ತಾರೆ ನಗರಸಭಾ ಅಧಿಕಾರಿಗಳು.
ಈ ಹಿಂದೆ ಗುತ್ತಿಗೆ ಪಡೆದ ಮಹಾರಾಷ್ಟ್ರ ಮೂಲದ ಎನ್‍ಜಿಓ ಸಂಸ್ಥೆಯೇ ಈ ಬಾರಿಯೂ ಸಹ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ಸಿದ್ಧವಿದೆ. ಆದರೆ ಸ್ಥಳದ ಅಭಾವ ಸೇರಿದಂತೆ ಹಲವು ಅಡೆತಡೆಗಳಿಗಳಿದ್ದ ಕಾರಣ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.
- ಆರ್.ಪಿ.ನಾಯ್ಕ (ಪೌರಾಯುಕ್ತ, ನಗರಸಭೆ, ಕಾರವಾರ)
ನಗರ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ದಿನೇದಿನೆ ಹೆಚ್ಚುತ್ತಿದ್ದು, ಪಾದಚಾರಿಗಳು ಸೇರಿದಂತೆ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ಈ ಬಗ್ಗೆ ನಗರಸಭೆ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಂಡು, ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು.