ಅಂಕೋಲಾ : ಇಲ್ಲಿಯ ಪುಂಡಲೀಕಬೇಣದ ಶ್ರೀ ರಾಮ ಜಪಯಜ್ಞ ಸಂಕೀರ್ತನಂ ಮಹಾಮಂಡಳಿಯ ವತಿಯಿಂದ ಪುಂಡಲೀಕಬೇಣದ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಶ್ರೀ ರಾಮ ಜಪಯಜ್ಞ ಸಂಕೀರ್ತನಂ ಕೃತಿ ಮತ್ತು ಧ್ವನಿ ಸುರಳಿಯನ್ನು ವಿಶ್ರಾಂತ ಪ್ರಾಚಾರ್ಯ ಡಾ. ರಾಮಕೃಷ್ಣ ಗುಂದಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಸಚ್ಛಾರಿತ್ರ್ಯ, ಸೌಜನ್ಯಶೀಲ ನಡುವಳಿಕೆ ಮರೆಯಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರ ಮತ್ತು ಬದುಕನ್ನು ಎದುರಿಸುವ ಸಾಮಥ್ರ್ಯ ಬೆಳೆಸಬೇಕಾಗಿರುವ ಇಂದಿನ ಸಂದರ್ಭದಲ್ಲಿ ಶಿವದಾಸನ್ ಅವರು ರಾಮಾಯಣವನ್ನು ಅತ್ಯಂತ ಸರಳ ಸುಂದರವಾಗಿ ಹಾಡಿನ ರೂಪದಲ್ಲಿ ರಚಿಸುವ ಮೂಲಕ ಮಕ್ಕಳಲ್ಲಿ ಇಡೀ ರಾಮಾಯಣದ ಜ್ಞಾನವನ್ನು ಬಿತ್ತುವ ಮಾದರಿ ಕಾರ್ಯವನ್ನು ಮಾಡಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆಯ ಅಧ್ಯಕ್ಷೆ ಶಾಂತಲಾ ಅರುಣ ನಾಡಕರ್ಣಿ ಮಾತನಾಡಿ, ಕೃತಿಕಾರ ಶಿವದಾಸನ್ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಅಂಕೋಲೆಯ ಮನಗೆದ್ದವರು. ಈಗ ಈ ರಾಮಾಯಣ ಕೃತಿಯ ಮೂಲಕ ಇನ್ನೊಂದು ಮಹತ್ಕಾರ್ಯ ಮಾಡಿದ್ದು ಇವರಿಗೆ ಎಲ್ಲರ ಸಹಕಾರ ಸಿಗಬೇಕಾಗಿದೆ ಎಂದರು.
ಪತ್ರಕರ್ತ ವಿಠ್ಠಲದಾಸ ಕಾಮತ್, ನಿವೃತ್ತ ದೈಹಿಕ ಶಿಕ್ಷಕ ಎಂ.ಎಂ. ಕರ್ಕಿಕರ್ ಮಾತನಾಡಿ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಜಿ.ಸಿ. ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಕುಮಾರ್ ಮಾತನಾಡಿ ರಾಮಾಯಣ ಕೃತಿ ರಚನೆ ಹಿನ್ನೆಲೆಯಲ್ಲಿನ ಬೆಳವಣಿಗೆಯನ್ನು ವಿವರಿಸಿದರು.
ಶೀತಲ ಆಗೇರ್ ಪ್ರಾರ್ಥನೆ ಮಾಡಿದರು. ಗ್ರಂಥಪಾಲ ಡಾ.ನಂಜುಂಡಯ್ಯ ಸ್ವಾಗತಿಸಿದರು. ಕೃತಿಕಾರ ಎಂ.ಎನ್.ಶಿವದಾಸನ್ ಪ್ರಾಸ್ತಾವಿಕ ಮಾತನಾಡಿ, ರಾಮಾಯಣ ಕೃತಿಯನ್ನು 117 ಶ್ಲೋಕಗಳ ಮೂಲಕ ಸರಳವಾಗಿ ರಚನೆ ಮಾಡಲಾಗಿದ್ದು, ಮಕ್ಕಳನ್ನು ಈ ಜಪಯಜ್ಞದಲ್ಲಿ ತೊಡಗಿಸಲಾಗಿದೆ. ರಾಮಾಯಣ ಪಠಣ ಸುಲಭವಾಗಬೇಕೆನ್ನುವ ದೃಷ್ಟಿಯಿಂದ ಎಲ್ಲ ಪದ್ಯಗಳನ್ನು ಗಾಯಕ ಮಹೇಶ ಮಹಾಲೆ ಮೂಲಕ ಹಾಡಿಸಿ ಧ್ವನಿ ಸುರುಳಿಯನ್ನೂ ರಚಿಸಲಾಗಿದೆ ಎಂದರು.
ಪ್ರಾಚಾರ್ಯೆ ಸರೋಜಿನಿ ಹಾರವಾಡೇಕರ್ ವಂದಿಸಿದರು. ಮುಖ್ಯಾಧ್ಯಾಪಕ ಮಧುಕೇಶ್ವರ ಶೆಡಗೇರಿ ನಿರ್ವಹಿಸಿದರು. ಪುರಸಭೆಯ ಸದಸ್ಯ ಮಂಗೇಶ ಆಗೇರ್ , ಸಮಿತಿ ಕಾರ್ಯದರ್ಶಿ ಅರುಣ ಶೆಡಗೇರಿ, ಪ್ರಮುಖರಾದ ಅರುಣ ಶೇಣ್ವಿ, ಸದಾನಂದ ಕುರ್ಡೇಕರ್, ರಾಘವೇಂದ್ರ ಮಹಾಲೆ ಮತ್ತಿತರರು ಉಪಸ್ಥಿತದ್ದರು.