ಶಿರಸಿ: ಬಿದ್ರಕಾನ್ ಕೊಡಗಿಬೈಲ್‌ನಲ್ಲಿ ಸ್ಥಳೀಯ ನಾಗರಿಕರು ಹಾಗೂ ಉಡುಪಿಯ ನಾಧಾವದಾನ ಸಂಯುಕ್ತ ಆಶ್ರಯದಲ್ಲಿ ದೇವರ ವಾರ್ಷಿಕ ಸಮಾರಾಧನೆ ಪ್ರಯುಕ್ತ ಸಂಘಟಿಸಿದ್ದ ಗಾನ ವೈಭವ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಗಾನ ವೈಭವದಲ್ಲಿ ಸಂಪ್ರದಾಯದಂತೆ ಗಣಪತಿ ಪೂಜೆ ಪದ್ಯದೊಂದಿಗೆ ಆರಂಭಗೊಂಡು ವಿವಿಧ ಪ್ರಸಂಗಗಳ ಹಾಡು ಹಾಗೂ ಇಬ್ಬರು ಭಾಗವತರ ದ್ವಂದ್ವ ರೂಪದಲ್ಲಿ ಹಾಡಲ್ಪಟ್ಟು ಕಲಾಭಿಮಾನಿಗಳ ಮನಸೂರೆಗೊಂಡಿದೆ.
ಸಾಲಿಗ್ರಾಮ ಮೇಳದ ಪ್ರಧಾನ ಭಗವತರಾದ ಹಿಲ್ಲೂರು ರಾಮಕೃಷ್ಣ ಹೆಗಡೆ ಅವರು ಒಡ್ಡೊಲಗ ದಲ್ಲಿ ಶನೇಶ್ವರ ಮಹಾತ್ಮೆ, ಪ್ರಸಂಗ ಪದ್ಯದೊಂದಿಗೆ ಗಾನ ವೈಭವ ಆರಂಭಿಸಿದರು. ನಂತರ ಶೃಂಗಾರ ರಸದಲ್ಲಿ ಮಾನಿಷಾದಾ, ಸಂವಾದದಲ್ಲಿ ಕುಮಾರ ವಿಜಯ, ಹಾಸ್ಯದಲ್ಲಿ ಬಬ್ರುವಾಹನ ಕಾಳಗ ಹೀಗೆ ಹಂತಹ೦ತವಾಗಿ ಹಾಡಿದರೆ ಇನ್ನೊಂದು ಭಾಗವತಿಕೆಯಲ್ಲಿ ಕುಮಾರಿ ಶ್ರೀರಕ್ಷಾ ಹೆಗಡೆ ಸಿದ್ದಾಪುರ ಅವರು ಒಡ್ಡೊಲಗದಲ್ಲಿ ಮಾರುತಿ ಪ್ರತಾಪ, ಶೃಂಗಾರ ರಸದಲ್ಲಿ ಋಕ್ಮಾಂಗಧ ಚರಿತ್ರೆ, ಸಂವಾದದಲ್ಲಿ ದ್ರೌಪದಿ ವಸ್ತ್ರ್ರಾಪಹರಣ ಹಾಗೂ ಹಾಸ್ಯದಲ್ಲಿ ಕವಿರತ್ನ ಕಾಳಿದಾಸ ಪ್ರಸಂಗಗಳಿಂದ ಆಯ್ದ ಹಾಡುಗಳನ್ನು ಹಾಡಿ ಸಭೆ ತಲೆದೂಗುವಂತೆ ಮಾಡಿದರು.
ದ್ವಂದ್ವ ಹಾಡಿನ ಪ್ರಯೋಗವಾಗಿ ಇಬ್ಬರು ಭಾಗವತರು ಕಾಳಿದಾಸ ಪ್ರಸಂಗದ ಜನಪ್ರಿಯ ಹಾಡಾದ ಮಾಣಿಕ್ಯ ವೀಣಾ ಹಾಗೂ ಭೀಷ್ಮ ವಿಜಯ ಪ್ರಸಂಗದ ಪರಮ ಋಷಿ ಮಂಡಲದೋಳ್ ಮತ್ತು ಸುಬ್ರಾಯ ಚೊಕ್ಕಾಡಿ ರಚಿಸಿದ ಮುನಿಸು ತರವೇ ಹಾಡುಗಳನ್ನು ಹಾಡಿ ಸಭಿಕರ ಕರತಾಡನಕ್ಕೆ ಪಾತ್ರರಾದರು.
ಜನಾಪೇಕ್ಷೆಯ ಮೇರೆಗೆ ಬಂದ ಪಾಂಚಜನ್ಯ, ಈಶ್ವರಿ ಪರಮೇಶ್ವರಿ, ಲವಕುಶ, ಚಂದ್ರಮುಖಿ ಸೂರ್ಯಸಖಿ ಹಾಗೂ ಓಂಕಾರರೂಪಿಣಿ ಮುಂತಾದ ಪ್ರಸಂಗಗಳ ಹಾಡನ್ನು ಹಿಲ್ಲೂರು ಅವರು ಸೊಗಸಾಗಿ ಹಾಡಿದರೆ ಸುಧನ್ವ ಮೋಕ್ಷ, ರತ್ನಾವತಿ ಕಲ್ಯಾಣ ಪ್ರಸಂಗಗಳ ಆಯ್ದ ಹಾಡುಗಳನ್ನು ಶ್ರೀರಕ್ಷಾ ಹೆಗಡೆ ಸುಮಧುರವಾಗಿ ಹಾಡಿ ಸೈ ಎನಿಸಿಕೊಂಡರು. ಕೊನೆಯ ಹಂತವಾಗಿ ಓಂಕಾರ ರೂಪಿಣಿಯ ಸುಂದರ ಮಂಗಲ ಪದ್ಯದೊಂದಿಗೆ ಕಾರ್ಯಕ್ರಮ ಸಮಾಪ್ತಗೊಂಡಿದ್ದು, ಗಾನ ವೈಭವದಲ್ಲಿ ಉಡುಪಿ ನಾಧಾವದಾನದ ಮುಖ್ಯಸ್ಥ ಎನ್.ಜಿ.ಹೆಗಡೆ ಯಲ್ಲಾಪುರ ಮದ್ದಳೆಯಲ್ಲಿ, ಚಂಡೆಯಲ್ಲಿ ಪ್ರಸನ್ನ ಭಟ್ಟ ಹೆಗ್ಗಾರ ಹಾಗೂ ನಿರೂಪಕರಾಗಿ ಗಿರಿಧರ ಕಬ್ನಳ್ಳಿ ಆಯಾ ಹಂತದಲ್ಲಿ ಸಮರ್ಥವಾಗಿ ಸಹಕರಿಸಿದರು.
ಮುಂಜಾನೆಯಿಂದಲೆ ಆರಂಭಗೊಂಡ ದೇವರ ಸಮಾರಾಧನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕೊಡಗಿಬೈಲ್‌ನ ಹಿರಿಯರಾದ ಹನುಮಂತ ಗೌಡ, ಕೃಷ್ಣ ಗೌಡ, ಕೆ.ಜಿ.ಗೌಡ, ಅಣ್ಣಪ್ಪ ಗೌಡ ಹಾಗೂ ಇತರರು ಪಾಲ್ಗೊಂಡರು.