
ಕುಮಟಾ: ಕೊರೊನಾ ನಿರ್ವಹಣೆ ಹಾಗೂ ಲಸಿಕೆ ವಿತರಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಡವುತ್ತಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಹಾಗೂ ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮದ ಉಸ್ತುವಾರಿ ಬಿ.ಕೆ.ಹರಿಪ್ರಸಾದ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಸೋಮವಾರ ಪಟ್ಟಣದ ಖಾಸಗಿ ಹೊಟೆಲ್‍ನಲ್ಲಿ ಜಿಲ್ಲಾ ಹಾಗೂ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸಹಾಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಸಹಾಯ ಹಸ್ತ ಕಾರ್ಯಕ್ರಮದ ರೂಪುರೇಷೆಗಳ ಕುರಿತು ವಿವರಿಸಿದ ಅವರು, ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ತಾಲೂಕಿನಾದ್ಯಂತ ಮನೆ ಮನೆಗೆ ತೆರಳಿ ಕೊರೊನಾ ಸೋಂಕಿಗೆ ಒಳಗಾಗಿರುವವರ ಮಾಹಿತಿ ಪಡೆದು, ಸೂಕ್ತ ವ್ಯವಸ್ಥೆ ಕಲ್ಪಿಸಲಿದ್ದಾರೆ. ಅಲ್ಲದೇ, ಲಾಕ್‍ಡೌನ್‍ನಿಂದ ತೀವ್ರ ಸಂಕಷ್ಟ ಅನುಭವಿಸಿ, ಸರ್ಕಾರದಿಂದ ಯಾವುದೇ ಸಹಕಾರ ಪಡೆಯದೇ ಇರುವವರ ಮಾಹಿತಿ ಸಂಗ್ರಹಿಸಿ, ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ, ಎಲ್ಲರಿಗೂ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ಕೊರೊನಾ ಸೋಂಕಿಗೆ ಒಳಗಾದವರ ಹಾಗೂ ಲಾಕ್‍ಡೌನ್ ಪರಿಣಾಮದಿಂದ ಕಷ್ಟ ಅನುಭವಿಸಿರುವ ಕ್ಷೇತ್ರದ ಜನರ ಪರಿಸ್ಥಿತಿಯನ್ನು ಮತ್ತು ಕೊರೊನಾ ಸೋಂಕಿನಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವ ಕುಟುಂಬಗಳ ಕಷ್ಟದ ಪರಿಸ್ಥಿತಿಯನ್ನು ವಿವರಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿಮ್ಮಣ್ಣ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎ.ಭಾವಾ, ವಿ.ಎಸ್.ಆರಾಧ್ಯ, ಬಸವರಾಜ ದೊಡ್ಮನಿ, ಅಬ್ದುಲ ಮಜೀದ, ಸುರೇಶ್ಚಂದ್ರ ಶೆಟ್ಟಿ, ಜಿ.ಪಂ ಸದಸ್ಯ ರತ್ನಾಕರ ನಾಯ್ಕ, ಪ್ರಮುಖರಾದ ಹೊನ್ನಪ್ಪ ನಾಯಕ, ನಾಗೇಶ ನಾಯ್ಕ, ರವಿಕುಮಾರ ಎಂ. ಶೆಟ್ಟಿ, ಸುರೇಖಾ ವಾರೇಕರ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಸೆಲ್ ಅಧ್ಯಕ್ಷರು, ಘಟಕಾಧ್ಯಕ್ಷರು, ಜಿಲ್ಲಾ, ತಾಲೂಕಾ,ಗ್ರಾಮ ಪಂಚಾಯತ, ಪುರಸಭೆ ಹಾಲಿ-ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ಮುಖಂಡರಿದ್ದರು.