ಕಾರವಾರ: ಅರಣ್ಯ ಇಲಾಖೆ ಹಾಗೂ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ತಾಲೂಕಿನ ಗೋಟೆಗಾಳಿಯಲ್ಲಿ ನೂತನವಾಗಿ ೧ ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣಗೊಂಡ ಚಿಟ್ಟೆ ಉದ್ಯಾನವನ ಶನಿವಾರ ಲೋಕಾರ್ಪಣೆಗೊಂಡಿತು.
ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಚಿಟ್ಟೆ ಉದ್ಯಾನವನವನ್ನು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಅರಣ್ಯ ಇಲಾಖೆ ಹಾಗೂ ಕೈಗಾ ಅಣು ವಿದ್ಯುತ್ ಘಟಕದ ಸಹಯೋಗದಿಂದ ಗೋಟೆಗಾಳಿಯಲ್ಲಿ ಅತ್ಯುತ್ತಮವಾದ ಚಿಟ್ಟೆ ಉದ್ಯಾನವನವನ್ನು ನಿರ್ಮಿಸಿದ್ದಾರೆ. ಈ ಉದ್ಯಾನವನದಲ್ಲಿ ಸಾಕಷ್ಟು ತಳಿಯ ಚಿಟ್ಟೆಗಳನ್ನು ನೋಡಬಹುದಾಗಿದೆ. ಇದರಿಂದ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಸಾಕಷ್ಟು ಉಪಯೋಗವಾಗಲಿದೆ ಎಂದ ಅವರು, ಗ್ರಾಮೀಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಆದ್ಯತೆ ನೀಡಿದೆ ಎಂದರು.
ಎನ್‌ಪಿಸಿಐಎಲ್‌ನ ಅಧಿಕಾರಿ ಪಿ.ಜಿ.ರಾಯಚೂರು ಮಾತನಾಡಿ, ಸಹ್ಯಾದ್ರಿಯ ಮಡಿಲು ಪ್ರವಾಸೋದ್ಯಮದ ಉತ್ತಮ ತಾಣವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಜೊತೆ ಕೈಗಾ ಘಟಕ ಸದಾ ಕೈಜೊಡಿಸಲಿದೆ. ಉದ್ಯಾನವನದ ಪ್ರಯೋಜನವನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರು ಪಡೆಯಲಿ ಎಂದರು.
ಭಾ.ಅ.ಸೇ ಸಂಶೋಧನಾ ವೃತ್ತ ಧಾರವಾಡದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆವಿ ಮಾತನಾಡಿ, ಕೈಗಾ ಸಹಯೋಗದಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ. ಅಣಶಿ ಭಾಗದಲ್ಲೂ ಪ್ರವಾಸಿ ತಾಣಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಅಲ್ಲದೇ, ಕದ್ರಾ ಸುತ್ತಮುತ್ತ ಹಾಗೂ ತಾಲೂಕುಗಳಲ್ಲಿ ಇನ್ನೂ ಹೆಚ್ಚಿನ ಉದ್ಯಾನವನ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ನಡೆಸಲು ಚಿಂತಿಸಲಾಗಿದೆ. ಇದು ಪ್ರವಾಸಿಗರಿಗೆ ವಿಶ್ರಾಂತಿ ತಾಣವೂ ಹೌದು ಎಂದರು.
ಭಾ.ಅ.ಸೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮರಿಯಾ ಕೃಷ್ಣರಾಜು ಮಾತನಾಡಿ, ಕೈಗಾ ಸಹಯೋಗದಲ್ಲಿ ಈ ಉದ್ಯಾನವನ ನಿರ್ಮಾನಗೊಂಡಿದೆ. ಈ ಕಾರ್ಯಕ್ಕೆ ಸ್ಥಳಿಯರೂ ಸಹ ಉತ್ತಮ ಸಹಕಾರ ನೀಡಿದ್ದಾರೆ. ಸ್ಥಳೀಯರ ಮನವಿ ಮೇರೆಗೆ ಉದ್ಯಾನವನದಲ್ಲಿಯೇ ವೇದಿಕೆ ಕೂಡ ನಿರ್ಮಿಸಲಾಗಿದೆ. ೩೦೦ ಪ್ರಬೇಧದ ಚಿಟ್ಟೆಗಳು ನಮ್ಮ ದೇಶದಲ್ಲಿದ್ದು, ಚಿಟ್ಟೆಗಳ ಜೀವನ ಶೈಲಿ ವಿಶೇಷವಾಗಿದೆ. ಇಲ್ಲಿಯೂ ಸಹ ಹಲವು ತಳಿಯ ಚಿಟ್ಟೆಗಳಿವೆ. ಇದರಿಂದ ಗ್ರಾಮದ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಾಕಷ್ಟು ಅವಕಾಶವಿದೆ ಎಂದರು.
ಇನ್ನೋರ್ವ ಕೈಗಾ ಘಟಕದ ಅಧಿಕಾರಿ ಬಿ.ಕೆ ಚನ್ನಕೇಶವ ಮಾತನಾಡಿ, ಅರಣ್ಯ ಇಲಾಖೆ ಜೊತೆ ಕೈಗಾ ಘಟಕ ಅತ್ಯುತ್ತಮ ಸಂಬAಧ ಹೊಂದಿದೆ. ಸಿಎಸ್‌ಆರ್ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೈಗಾ ಸುತ್ತಲಿನ ಭಾಗಗಳ ಅಭಿವೃದ್ಧಿಗೆ ಎನ್‌ಪಿಸಿಐಎಲ್ ಸದಾ ಕೈಜೋಡಿಸಲಿದೆ. ಕೈಗಾ ಘಟಕಕ್ಕೆ ಇನ್ನೂ ಹೆಚ್ಚಿನ ಪ್ರದೇಶ ದೊರೆತರೆ ಹಲವು ಗ್ರಾಮಗಳ ಅಭಿವೃದ್ಧಿ ಸಾಧ್ಯ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ಪ್ರಭಾ ಮಡಗಾಂವಕರ್ ಮಾತನಾಡಿದರು. ಚಿಟ್ಟೆ ಉದ್ಯಾನವನ ನಿರ್ಮಾಣಕ್ಕೆ ಸಹಕಾರ ನೀಡಿದ ಗಣ್ಯರಿಗೆ ಸನ್ಮಾನಿಸಲಾಯಿತು. ಗೋಪಶಿಟ್ಟಾ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಪ್ರಾಸ್ತಾವಿಕ ಮಾನಾಡಿದರು. ಕದ್ರಾ ವಲಯ ಅರಣ್ಯಾಧಿಕಾರಿ ಗಜಾನನ ನಾಯ್ಕ ವಂದಿಸಿದರು.