ಅಂಕೋಲಾ: ಅನಾದಿಕಾಲದಿಂದ ಅರಣ್ಯ ಭೂಮಿ ಮೇಲೆ ಅವಲಂಬಿತವಾಗಿರುವಂತಹ ತಾಲೂಕಿನ ಹಟ್ಟಿಕೇರಿಯ ಶೇವೆಗುಳಿ ಗ್ರಾಮದ ಬುಡಕಟ್ಟು ಕುಣಬಿ ಸಮಾಜದ ಬೆಲ್ಲ ಮತ್ತು ಸಾತಾ ಕುಣಬಿ ಅತಿಕ್ರಮಣ ಭೂಮಿ ಸಾಗುವಳಿಗೆ ಆತಂಕ ಉಂಟುಮಾಡಿ ಬೆಳೆನಾಶ ಮಾಡಿರುವ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯಕ್ಕೆ ತಾಲೂಕಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಎಂದು ತಾಲೂಕ ಕಾಂಗ್ರೇಸ್ ಹಿಂದುಳಿದ ಘಟಕದ ಅಧ್ಯಕ್ಷ ರಾಜೇಶ ಮಿತ್ರ ನಾಯ್ಕ, ತೇಂಗಿನಕೇರಿ ಹೇಳಿದ್ದಾರೆ.
ಕಳೆದ ಮೂರು-ನಾಲ್ಕು ದಶಕದಿಂದ ಅರಣ್ಯ ಭೂಮಿ ಅತಿಕ್ರಮಿಸಿ ಸಾಗುವಳಿ ಮಾಡಿಕೊಂಡು ಜೀವಿಸುತ್ತಿದ್ದು ಅರಣ್ಯ ಭೂಮಿ ಮಂಜೂರಿಗೆ ಸಂಬಂಧ ಪಟ್ಟಂತೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಜಿಪಿಎಸ್ ಜರುಗಿರುವಂತಹ ಅತಿಕ್ರಮಣ ಕ್ಷೇತ್ರದಲ್ಲಿ ಏಕಾಎಕಿಯಾಗಿ ಗಿಡ-ಮರ ಕಡಿದು ಅಪಾರ ಪ್ರಮಾಣದಲ್ಲಿ ಅತಿಕ್ರಮಣದಾರರಿಗೆ ನಷ್ಟ ಉಂಟುಮಾಡಿರುವ ಅರಣ್ಯ ಸಿಬ್ಬಂದಿಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳು ದಿನನಿತ್ಯ ಅರಣ್ಯವಾಸಿಗಳ ಮೇಲೆ ದೌರ್ಜನ್ಯ, ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವ ಪ್ರವೃತ್ತಿ ಕಡಿಮೆಯಾಗಬೇಕು ಇಲ್ಲದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದೆಂದು ರಾಜೇಶ ನಾಯ್ಕ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವಿಜಯ ಪಿಳ್ಯಾ, ಹೊಸಗದ್ದೆ ತಾಲೂಕ ಅರಣ್ಯ ಅತಿಕ್ರಮಣದಾರರ ಸಂಚಾಲಕ, ಗಣೇಶ ನಾಯ್ಕ, ಶೇಡಿಕುಳಿ ಕಾಂಗ್ರೇಸ್ ಹಿಂದುಳಿದ ಘಟಕದ ಉಪಾಧ್ಯಕ್ಷ ಉಪಸ್ಥಿತರಿದ್ದರು.