ಕಾರವಾರ: ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ 73ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರ ತೆಗೆಸಿದ ಘಟನೆಯನ್ನು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಖಂಡಿಸಿದೆ.
ನ್ಯಾಯಾಂಗ ಹುದ್ದೆಯಲ್ಲಿರುವವರು ಸಂವಿಧಾನ ಶಿಲ್ಪಿಯವರ ಭಾವಚಿತ್ರಕ್ಕೆ ಅವಮಾನಿಸುವ ಮೂಲಕ ವಿಕೃತ ಮನಸ್ಥಿತಿ ಮೆರೆದಿದ್ದಾರೆ. ದೇಶಕ್ಕೆ ಸಂವಿಧಾನ ಬರೆದವರ ಬಗ್ಗೆ ಈ ರೀತಿ ಮಾಡಿರುವುದು ಅಕ್ಷಮ್ಯ ಅಪರಾಧ. ತಕ್ಷಣ ನ್ಯಾಯಾಧೀಶರನ್ನು ಅಮಾನತು ಮಾಡಬೇಕು ಎಂದು ಕದರವೇ ಜಿಲ್ಲಾಧ್ಯಕ್ಷ ಎಲಿಷಾ ಯಲಕಪಾಟಿ ನೇತೃತ್ವದಲ್ಲಿ ಜಿಲ್ಲಾಡಳಿತದ ಮೂಲಕ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಪತ್ರ ರವಾನಿಸಿ ಒತ್ತಾಯಿಸಿದ್ದಾರೆ.
ನ್ಯಾಯಾಧೀಶರು ಸಂವಿಧಾನದ ಶಿಷ್ಟಾಚಾರವನ್ನು ಪಾಲನೆ ಮಾಡಿ ಇತರರಿಗೆ ಮಾದರಿಯಾಗಬೇಕು. ಆದರೆ ಇಂಥ ಹೆಜ್ಜೆ ಇಟ್ಟು ಸಂವಿಧಾನನ ಶಿಲ್ಪಿಗೆ ಅಪಮಾನ ಮಾಡಲಾಗಿದೆ. ಆದ್ದರಿಂದ ಈ ಕೂಡಲೇ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರವರನ್ನು ಸೇವೆಯಿಂದಲೇ ವಜಾಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರಾದ ಸಾಗರ್ ವಡ್ಡರ್, ರುಸ್ತುಂ ಸಿದ್ದಿ, ಜಾಫರ್, ಕೃಷ್ಣ ವಡ್ಡರ್, ಕೆಂಪಣ್ಣ ಮಣ್ಣವಡ್ಡರ್ ಹಾಗೂ ಮುಂತಾದವರು ಹಾಜರಿದ್ದರು.