ಶಿರಸಿ: ಕೃಷಿಕರಿಗೆ ಕಾಲಕ್ಕನುಗುಣವಾಗಿ ಅತ್ಯಗತ್ಯ ಮಾಹಿತಿಯನ್ನು ಒದಗಿಸುವ ‘ಸಸ್ಯ ಆರೈಕೆ’ ತೋಟ ನಿರ್ವಹಣೆಯ ಕೈಪಿಡಿಯನ್ನು ಗುರುವಾರ ನಗರದ ಅಗ್ರಿಕಲ್ಚರ್ ಡೆವಲಪ್ಮೆಂಟ್ ಸರ್ವೀಸ್ & ಡೆವಲಪ್ಮೆಂಟ್ ಸೊಸೈಟಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮವನ್ನು ಬೆಂಗಳೂರಿನ ಕರ್ನಾಟಕ ಅಗ್ರೋ ಕೆಮಿಕಲ್ಸ್ ನ ಚೀಪ್ ಮಾರ್ಕೆಟಿಂಗ್ ಮ್ಯಾನೇಜರ್ ಡಾ.ಎಂ ನಾರಾಯಣಸ್ವಾಮಿ ಮಾತನಾಡಿ, ಕೃಷಿಯಲ್ಲಿ ಕಲಿಯುವುದು ಪೂರ್ಣವಾಯ್ತು ಎಂದಿಲ್ಲ, ಕಲಿಕೆ ನಿರಂತರ. ಸಾಂಪ್ರದಾಯಿಕ ಕೃಷಿಗೆ ಪರ್ಯಾಯವಾಗಿ ತಾಂತ್ರಿಕತೆ, ಆಧುನಿಕತೆಯನ್ನು ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಹತ್ತರವಾದ ಬದಲಾವಣೆ ಸಾಧ್ಯ.
ಬೆಳೆಗಳ ಸಂರಕ್ಷಣೆಗೆ ಮುಂಜಾಗೃತೆ ಬೇಕು. ಆಗ ನಷ್ಟ ಕಡಿಮೆ ಆಗುತ್ತದೆ. ಬೆಳೆ ಕೂಡ ಹೆಚ್ಚುತ್ತದೆ. ಬಡತನ ಇರುವ ದೇಶದಲ್ಲಿ ಕಾರ್ಯಕ್ರಮ ಪಟ್ಟಿ ಹಾಕಿಕೊಂಡು ಅಭಿವೃದ್ಧಿ ಮಾಡುವಲ್ಲಿ, ನಿರ್ವಹಣೆ ಮಾಡುವಲ್ಲಿ ಭಾರತೀಯರು ಹಿಂದೆ ಬೀಳುತ್ತಿದ್ದಾರೆ ಎಂದರು.
ಕೃಷಿಯಲ್ಲಿ ಕಲಿತಂತೆ ಕೃಷಿ ಬೆಳೆಯುತ್ತದೆ. ಕೃಷಿಯಲ್ಲಿ ಸಾಧನೆ ಮಾಡಲು ತಾಂತ್ರಿಕತೆ ಅಳವಡಿಸಿಕೊಳ್ಳಬೇಕಿದೆ. ದಾವಣಗೆರೆ, ಚಿತ್ರದುರ್ಗದಲ್ಲೂ ಅಡಿಕೆ ಪ್ರಮುಖ ಬೇಸಾಯ ಮಾಡಿಕೊಂಡಿವೆ ಎಂದ ಅವರು, ಡೆವಲಪ್ಮೆಂಟ್ ಸೊಸೈಟಿ ಐದು ದಶಕಗಳ ಸಾಧನೆ ಮಾಡಿದೆ ಎಂದೂ ಬಣ್ಣಿಸಿದರು.
ವೇದಿಕೆಯಲ್ಲಿ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಉಪಾಧ್ಯಕ್ಷ ಐ.ಎಂ.ಹೆಗಡೆ ಇದ್ದರು. ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಗೋಪಾಲ ಹೆಗಡೆ ಸ್ವಾಗತಿಸಿದರು. ವಿ.ಎಂ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀಪಾದ ಹೆಗಡೆ ಕಡವೆ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಇದ್ದರು.