• Slide
  Slide
  Slide
  previous arrow
  next arrow
 • ಸೊರಬ ಸಮೀಪ ಕುಪ್ಪೆಯಲ್ಲಿ ಪುರಾತನ ದೇವರ ಕಾನು ಪತ್ತೆ

  300x250 AD

  ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕು ಸಾವಿರ ಕೆರೆಗಳು, ನೂರಾರು ಕಾನುಗಳ ತವರೂರು. ಕಾನುಗಳೆಲ್ಲ ಗ್ರಾಮ ಕಾಡುಗಳು, ಕಂದಾಯ ಕಾಡುಗಳು. ಇಲ್ಲಿ ಕೆಲವು ಹಳ್ಳಿಗಳಲ್ಲಿ ಖಾತೆ ಕಾನು ಎಂದೇ ಉಲ್ಲೇಖಗಳಿವೆ. ಕೆಲವು ಹಳ್ಳಿಗಳ ಜಮೀನ್ದಾರರು ಖಾತೆ ಕಾನು ಹಕ್ಕಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕಿದವರೂ ಇದ್ದಾರೆ. ಆದರೆ ಸೊರಬ ಸಮೀಪದ ಹೆಗ್ಗೋಡು ಪಂಚಾಯತಿ ಕುಪ್ಪೆ ಗ್ರಾಮದವರು ನೂರಾರು ವರ್ಷಗಳಿಂದ ಖಾತೆ ಕಾನು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ಅರಣ್ಯ ಒತ್ತುವರಿ ತಡೆಯಲು ಇನ್ನಿಲ್ಲದ ಶ್ರಮ ಹಾಕಿದ್ದಾರೆ. ಇಲ್ಲಿಯ ಕಾನು ಹಲವು ವೈಶಿಷ್ಟ್ಯಗಳಿಂದ ದೇವರ ಕಾಡಾಗಿದೆ.

  ಇಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯ ದೇವರ ದೇವಾಲಯವಿದೆ. ಅರಣ್ಯದ ಮಧ್ಯೆ ಪುರಾತನ ಪುಟ್ಟ ಪುಷ್ಕರಣಿ (ಕೆರೆ) ಇದೆ. ಪಕ್ಕದಲ್ಲಿ ಹುಲಿದೇವರ ಮೂರ್ತಿ ಇದೆ. ಈಶ್ವರ ಲಿಂಗಗಳು ಇವೆ. ಇವೆಲ್ಲ ದೇವರ ಕಾಡಿನ ಇತಿಹಾಸದ ಕಥೆ ಹೇಳುತ್ತವೆ. ವಿನಾಶದ ಅಂಚಿನ ವರ್ಗಕ್ಕೆ ಸೇರಿದ ಸೀತಾ ಅಶೋಕ ವೃಕ್ಷಗಳು ಇಲ್ಲಿವೆ. ಇದೊಂದು ಅಪರೂಪದ ವೃಕ್ಷ. (ಅಮೂಲ್ಯ ಜೌಷಧಿ ಸಸ್ಯಗಳು). ಸುಮಾರು 300 ಸೀತಾ ಅಶೋಕ ವೃಕ್ಷಗಳು ಇಲ್ಲಿವೆ. ಬೆತ್ತ ಸಂಕುಲ ಇದೆ. ಸೀತಾವನ ದೇವರ ಕಾಡು ಪ್ರದೇಶದಲ್ಲಿ ನಂದಿ, ರಂಜಲು, ಹೆಬ್ಬಲಸು, ದಡಸಲು, ಬಣಗಿ, ಶಿವನೆ, ಮುಂತಾದ ಅಮೂಲ್ಯ ಜಾತಿಯ ವೃಕ್ಷ ಸಂಕುಲವಿದೆ.

  ಗ್ರಾಮದ ಛತ್ರಪತಿ ಗೌಡ ಅವರೇ ಹೇಳುವಂತೆ, ಕುಪ್ಪೆ ಗ್ರಾಮ ಸರ್ವೆ ನಂ. ಒಂದರಲ್ಲಿ 395 ಎಕರೆ ಖಾತೆ ಕಾನು ಇತ್ತು. ಇದರಲ್ಲಿ ಸುಮಾರು 95 ಎಕರೆ ಕಾನು ಒತ್ತುವರಿ ಆಗಿತ್ತು. ಗ್ರಾಮ ಅರಣ್ಯ ಸಮಿತಿ ಸ್ಥಾಪನೆ ಆಯಿತು. ಕಾನು ರಕ್ಷಣಾ ಯೋಜನೆಯಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಅರಣ್ಯ ಇಲಾಖೆ 300 ಎಕರೆ ಕಾನು ಸುತ್ತ ಕಂದಕ ತೆಗೆದು ರಕ್ಷಣಾ ಕವಚ ನಿರ್ಮಿಸಲಾಗಿದೆ. 300 ಎಕರೆ ಕಾನು ಭೂಮಿಯಲ್ಲಿ 25 ಎಕರೆ ಪ್ರದೇಶಕ್ಕೆ ಅರಣ್ಯ ಇಲಾಖೆ ಪವಿತ್ರ ವನ ಎಂಬ ನಾಮಫಲಕ, ಸ್ವಾಗತ ಕಮಾನು ನಿರ್ಮಿಸಿತು.

  ಗ್ರಾಮ ಅರಣ್ಯ ಸಮಿತಿಯ ಪುನಶ್ಚೇತನವಾಗಬೇಕು ಎಂದು ಗ್ರಾಮ ಜನ ಹೇಳುತ್ತಾರೆ. ರಾಮನವಮಿ ದಿನ ವನದೇವತೆಯ ಪೂಜೆ ಮಾಡುತ್ತೇವೆ ಎಂಬ ಮಾಹಿತಿಯನ್ನು ಗ್ರಾಮ ಮುಖಂಡ ಆರ್.ಸಿ. ಪಟೇಲ್ ತಿಳಿಸಿದರು. ಕುಪ್ಪೆ ಕೊಂಡಗಳಲೆ ಔಲಗೋಡ ಗ್ರಾಮಗಳ ರೈತರನ್ನು ತಂಡ ಭೇಟಿ ಮಾಡಿತು.

  300x250 AD

  ಗ್ರಾಮಸ್ಥರ ಜೊತೆ ನಡೆದ ಸಮಾಲೋಚನೆಯಲ್ಲಿ ಸೀತಾ ಅಶೋಕ ದೇವರ ಕಾಡಿನಲ್ಲಿ ಕಾಂಕ್ರೀಟ್ ಕಟ್ಟಡ ನಿರ್ಮಿಸಬೇಡಿ ಎಂದು ಅನಂತ ಹೆಗಡೆ ಅಶೀಸರ ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು. ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಅವರು ಇಲ್ಲಿನ ಕಾಡಿನ ಐತಿಹಾಸಿಕ ವಿಶೇಷತೆಗಳ ದಾಖಲಾತಿ ಮಾಡುತ್ತೇವೆ ಎಂದರು.

  ಸೊರಬ ಪಟ್ಟಣದಿಂದ ಕೇವಲ 6 ಕಿಮೀ. ದೂರದ (ಸೊರಬ-ಸಾಗರ ರಸ್ತೆ) ಕುಪ್ಪೆ ಕಾನು ಪ್ರದೇಶಕ್ಕೆ “ಸೀತಾ ವನ ದೇವರ ಕಾಡು” ಎಂದು ಸ್ಥಳೀಯ ಪಂಚಾಯತ & ತಾಲೂಕಾ ಪಂಚಾಯತ ಜೀವ ವೈವಿಧ್ಯ ಸಮಿತಿಗಳು ಮಾನ್ಯತೆ ನೀಡಬೇಕು. ಸೀತಾವನದ ಸಸ್ಯ ವೈವಿಧ್ಯತೆ ದಾಖಲಾತಿ ಮಾಡಬೇಕು. ಇಲ್ಲಿಯ ಪುಷ್ಕರಣಿಯ ಪುನಶ್ಚೇತನ ಮಾಡಲು ಗ್ರಾಮ ಪಂಚಾಯತ ಕ್ರಿಯಾ ಯೋಜನೆ ರೂಪಿಸಬೇಕು. ಸೀತಾವನಕ್ಕೆ ಹೊಂದಿಕೊಂಡಿರುವ ಕೊಂಡಗಳಲೆ ಅರಣ್ಯಕ್ಕೆ ರಕ್ಷಣಾ ಬೇಲಿ ನಿರ್ಮಿಸಬೇಕು ಎಂದು ವೃಕ್ಷಲಕ್ಷ ತಂಡ ಶಿಫಾರಸು ಮಾಡಿದೆ.

  15 ವರ್ಷಗಳ ನಿರಂತರ ಪ್ರಯತ್ನ: ಸೊರಬ-ಸಾಗರ-ಹೊಸ ನಗರ ಶಿರಸಿ (ಬನವಾಸಿ) ತಾಲೂಕುಗಳಲ್ಲಿ ವೃಕ್ಷ ಲಕ್ಷ ಆಂದೋಲನ ಹಲವು ದೇವರ ಕಾಡುಗಳನ್ನು ಗುರುತಿಸಿದೆ. ಅಧ್ಯಯನ ಸಮೀಕ್ಷೆ, ನಡೆಸಿದೆ. ಸಂರಕ್ಷಣೆಗೆ ರಚನಾತ್ಮಕ ಆಂದೋಲನ ನಡೆಸುತ್ತಿದೆ. ಅರಣ್ಯ ಇಲಾಖೆ ಮೂಲಕ ದೇವರ ಕಾಡುಗಳಿಗೆ ರಕ್ಷಣಾ ಕವಚ ನಿರ್ಮಿಸಲು 20 ವರ್ಷಗಳಿಂದ ಪ್ರಯತ್ನ ನಡೆಸುತ್ತಿದೆ. ಇವುಗಳಲ್ಲಿ ಅಮ್ಮನ ಘಟ್ಟ, ಹೊಸಗುಂದ, ಹಳೇಸೊರಬ, ಗಂಟಿಕೊಪ್ಪ, ವರದಹಳ್ಳಿ, ವರದಾಮೂಲ ದೇವರ ಕಾಡುಗಳು ಸೇರಿವೆ. ಎಂದು ವೃಕ್ಷಲಕ್ಷ ಆಂದೋಲನದ ಕೆ. ವೆಂಕಟೇಶ ಮಾಹಿತಿ ನೀಡಿದ್ದಾರೆ. ದೇವರ ಕಾನುಗಳ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ, ಅರಣ್ಯ ಕಾಲೇಜು ವಿಜ್ಞಾನಿಗಳು.ಅಧ್ಯಯನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

  Share This
  300x250 AD
  300x250 AD
  300x250 AD
  Leaderboard Ad
  Back to top