ಮುಂಡಗೋಡ: ತಾಲೂಕಿನ ಹನುಮಾಪೂರ ಗ್ರಾಮದ ಕಾಳಿಕಾದೇವಿ ಮಂದಿರದ ಉತ್ತರಾಧಿಕಾರಿ ನೇಮಕ ವಿರೋಧಿಸಿ ಭಕ್ತರು ಹಾಗೂ ತಾಲೂಕು ಮುಂಖಂಡರು ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಗ್ರಾಮದ ಕಾಳಿಕಾದೇವಿ ಮಂದಿರದ ಸಂಸ್ಥಾಪಕ ಸದಾನಂದ ಶಿವಾಚಾರ್ಯ ಸ್ವಾಮಿಗಳು ೧೯೮೨ರಲ್ಲಿ ಗ್ರಾಮಕ್ಕೆ ಬಂದು ಗ್ರಾಮಸ್ಥರ, ತಾಲೂಕಿನ ವೀರಶೈವ ಲಿಂಗಾಯತ ಹಾಗೂ ಇತರ ಭಕ್ತರೊಂದಿಗೆ ಕಾಳಿಕಾದೇವಿ ಮಂದಿರವನ್ನು ಸ್ಥಾಪನೆ ಮಾಡಿದರು. ಜನರ ಕಷ್ಟ-ಕಾರ್ಪಣ್ಯಗಳನ್ನು ನಿವಾರಣೆ ಮಾಡುತ್ತ ಮಂದಿರವನ್ನು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಮಾಡಿ ರಾಜ್ಯದ ಮೂಲೆ-ಮೂಲೆಗಳಿಂದ ಭಕ್ತರನ್ನು ಸಂಪಾದಿಸಿ ಭಕ್ತರ ದೈವವೇ ಆಗಿದ್ದರು. ಗುರುಗಳು ಕೋವಿಡ್ ಮಹಾಮಾರಿಯಿಂದ ೨೦೨೧ರ ಜು.೬ರಂದು ಲಿಂಗೈಕ್ಯರಾಗಿದ್ದು ಅವರ ಗದ್ದುಗೆ (ಸಮಾಧಿ)ಯನ್ನು ಕಾಳಿಕಾ ಮಂದಿರದ ಆವರಣದಲ್ಲಿ ನಿರ್ಮಾಣ ಮಾಡಲಾಗಿದೆ. ಶ್ರೀಗಳ ಸ್ವಯಂ ಪ್ರೇರಣೆಯಿಂದ ಸ್ವ-ಶಕ್ತಿಯಿಂದ ಮಂದಿರ ನಿರ್ಮಾಣವಾಗಿದ್ದು ಯಾವುದೇ ಮಠ-ಪೀಠಗಳ ಶಾಖೆಯಾಗಿ ಬೆಳೆದು ಬಂದಿರುವುದಿಲ್ಲ. ಯಾವುದೇ ಗುರುಗಳು ಮಂದಿರದ ನೋವು ಕಷ್ಟ-ಸುಖಗಳಲ್ಲಿ ಭಾಗಿಯಾಗಿರುವುದಿಲ್ಲ. ಇದು ಒಂದು ಸ್ವತಂತ್ರ ಸಂಸ್ಥೆಯಾಗಿದ್ದು ಯಾವುದೇ ಧರ್ಮದ ಗುರುಗಳ ಸ್ವತ್ತಾಗಿರುವುದಿಲ್ಲ.
ಶ್ರೀಗಳು ಲಿಂಗೈಕ್ಯರಾದ ನಂತರ ಕೆಲವು ಪೀಠಾಚಾರ್ಯರು ಇದು ನಮ್ಮ ಶಾಖಾ ಮಠವೆಂದು ಇದಕ್ಕೆ ತಾವೇ ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತೇವೆಂದು ಪಟ್ಟು ಹಿಡಿದು ಉತ್ತರಾಧಿಕಾರಿಯಾಗಿ ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸೋಮಶೇಖರ ಸ್ವಾಮಿ ಪರ್ವತಾಶ್ರಮ ಬಳವಾತ ಇವರನ್ನು ನೇಮಕ ಮಾಡಿ ಘೋಷಣೆ ಮಾಡಿರುತ್ತಾರೆ. ಸೋಮಶೇಖರ ಮಂದಿರದಲ್ಲಿ ಕೆಲಕಾಲ ಇದ್ದು ಮಂದಿರದಲ್ಲಿ ಲಿಂಗೈಕ್ಯ ಗುರುಗಳು ಕೂಡಿಸಿ ಇಟ್ಟ ೨೪ಲಕ್ಷ ರೂಪಾಯಿ ನಗದು, ಬಂಗಾರದ ಒಡವೆಗಳನ್ನು, ಮಂದಿರಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಹಾಗೂ ಶ್ರೀಗಳ ಹೆಸರಿನಲ್ಲಿರುವ ಎಫ್.ಡಿ.ಬಾಂಡ್‌ಗಳನ್ನು ಕದ್ದುಕೊಂಡು ರಾತೊ-ರಾತ್ರಿ ಮಂದಿರದಿಂದ ೨೦೨೧ರ ನ.೨ರಂದು ಓಡಿ ಹೋಗಿರುತ್ತಾನೆ. ಇವನ ವಿರುದ್ಧ ಮುಂಡಗೋಡ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ರಾಜಕೀಯ ಒತ್ತಡದಿಂದ ದೂರು ದಾಖಲು ಆಗದಂತೆ ಠಾಣೆ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ನಿಜವಿರುತ್ತದೆ. ಈ ಕಾರಣದಿಂದಾಗಿ ಇಂತಹ ಕಳ್ಳ ದರೋಡೆಕೋರ ವ್ಯಕ್ತಿಯನ್ನು ಉತ್ತರಾಧಿಕಾರಿ ಮಾಡಲು ಹೊರಟಿರುವ ಪೀಠಾಚಾರ್ಯರು ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಹಾಗೂ ಶ್ರೀಮಂದಿರದ ಸಮಸ್ತ ಅಭಿವೃದ್ಧಿಗೆ ವೀರಶೈವ ಲಿಂಗಾಯತ ಪರಂಪರೆ ಹಾಗೂ ಹಿಂದಿನ ಗುರುಗಳು ಹಾಕಿಕೊಟ್ಟ ಮಾರ್ಗದಂತೆ ಹನುಮಾಪುರದ ಶ್ರೀಕಾಳಿಕಾ ಮಂದಿರವನ್ನು ಮುನ್ನಡೆಸಿಕೊಂಡು ಹೋಗಲು ಹನುಮಾಪುರ ಗ್ರಾಮಸ್ಥರು ತಾಲೂಕಿನ ವೀರಶೈವ ಲಿಂಗಾಯತ, ಎಲ್ಲ ಭಕ್ತ ಜನಾಂಗದವರು, ಮಠದ ಭಕ್ತರು ಹಾಗೂ ಹಿಂದಿನ ಗುರುಗಳ ವಂಶಸ್ಥರು ಸೇರಿಕೊಂಡು ಈ ದೇವಸ್ಥಾನವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸಲು ಸಿದ್ಧರಿದ್ದೇವೆ.
ಈ ಮಂದಿರದ ಅಭಿವೃದ್ಧಿಗಾಗಿ ಭಕ್ತರು ಸದಾ ಸಿದ್ಧರಿದ್ದು ಈ ಮಂದಿರಕ್ಕೆ ಯಾವುದೇ ಉತ್ತರಾಧಿಕಾರಿ ನೇಮಕದ ಅವಶ್ಯವಿರುವುದಿಲ್ಲ. ಕಾರಣ ಇದು ಸಂಪೂರ್ಣ ಸ್ವತಂತ್ರ‍್ಯ ಧಾರ್ಮಿಕ ಕೇಂದ್ರವಾಗಿದೆ. ಆದ ಕಾರಣ ಪೀಠಾಚಾರ್ಯರು ಈ ಮಂದಿರದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದನ್ನು ತಾಲೂಕಿನ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಮಸ್ತ ಭಕ್ತಾದಿಗಳು ಸಂಪೂರ್ಣ ವಿರೋಧ ಮಾಡಿದ್ದು ಉತ್ತರಾಧಿಕಾರಿ ನೇಮಕ ಹಾಗೂ ಪೀಠಾಚಾರ್ಯರ ಹಸ್ತಕ್ಷೇಪವನ್ನು ನಾವು ಸಂಪೂರ್ಣವಾಗಿ ಒಕ್ಕೊರಲಿನಿಂದ ಬಹಿಷ್ಕರಿಸಿರುತ್ತೇವೆ.
ಒಂದು ವೇಳೆ ನಮ್ಮೆಲ್ಲರ ಭಾವನೆಗಳ ವಿರುದ್ಧವಾಗಿ ಯಾವುದೇ ನಿರ್ಧಾರ ಕೈಗೊಂಡಲ್ಲಿ ಮುಂದೆ ಆಗುವ ಅನಾಹುತಗಳಿಗೆ ಪೀಠಾಚಾರ್ಯರು, ಸೋಮಶೇಖರಸ್ವಾಮಿ ಹಾಗೂ ಇವರ ಹಿಂದಿನಿಂದ ಬೆಂಬಲವಾಗಿ ನಿಂತ ವ್ಯಕ್ತಿಗಳೇ ಇದಕ್ಕೆ ನೇರ ಹೊಣೆಗಾರರಾಗುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ವೇಳೆ ಮುಖಂಡರಾದ ಉಮೇಶ ಬಿಜಾಪುರ, ಚಂದ್ರಶೇಖರ ಗಾಣಿಗೇರ, ಗುಡ್ಡಪ್ಪ ಕಾತೂರ, ನಾಗಪ್ಪ ಕಡಗಿ, ಮಹೇಶ ಹೊಸಕೊಪ್ಪ, ಮಲ್ಲಿಕಾರ್ಜುನ ಕುಟ್ರಿ, ಮಂಜುನಾಥ ಪಾಟೀಲ, ಗಿಡ್ಡಪ್ಪ ಹಿರೇಹಳ್ಳಿ, ಅಣ್ಣಪ್ಪ ಶೇಟ್, ಯಲ್ಲಪ್ಪ ವಡ್ಡರ, ಮಂಜುನಾಥ ಗೌಡಗೇರಿ, ತಿರುಪತಿ ಜನಗೇರಿ ಇತರರಿದ್ದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ ಮನವಿ ಸ್ವೀಕರಿಸಿದರು.