ಶಿರಸಿ: ಹಸಿ ಅಡಕೆ ಬೆಳೆಗಾರರು ಎದುರಿಸುತ್ತಿರುವ ಅಡಕೆ ಕೊಯ್ಯುವ ಸಮಸ್ಯೆ ಪರಿಹಾರಕ್ಕೆ ಸಹಕಾರಿ ಸಂಸ್ಥೆಗಳು ಮುಂದಾಗಿವೆ. ನೆಲದಿಂದಲೇ ಅಡಕೆ ಕೊಯ್ಯುವ ದೋಟಿಯ ತರಬೇತಿಯನ್ನು ನೀಡುತ್ತಿವೆ.
ಟಿಎಸ್‍ಎಸ್ ಸಹಕಾರಿ ಸಂಸ್ಥೆ ತಾಲೂಕಿನ ನೀರ್ನಳ್ಳಿಯ ಸೀತಾರಾಮ ಹೆಗಡೆ ತೋಟದಲ್ಲಿ ಗುರುವಾರ ದೋಟಿಯಲ್ಲಿ ಕೊನೆ ಕೊಯ್ಯುವ ಎರಡು ದಿನಗಳ ತರಬೇತಿ ಆರಂಭಿಸಿದೆ. ತರಬೇತಿಯಲ್ಲಿ ಆಸಕ್ತ ಒಂದಷ್ಟು ರೈತರು ಆಸಕ್ತಿ, ಲವಲವಿಕೆ, ಕುತೂಹಲದಿಂದ ಭಾಗಿಯಾಗಿದ್ದಾರೆ. ಸಂಪನ್ಮೂಲ ವ್ಯಕ್ತಿ ಉಮಾನಂದ ಭಟ್ಟ ಕೊಡ್ಲಳ್ಳಿ ದೋಟಿ ಬಳಸುವ ಬಗೆ, ಕೊಯ್ಯುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಟಿಎಸ್‍ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಉದ್ಘಾಟಿಸಿ, ತರಬೇತಿ ಪಡೆದವರು ಇದನ್ನು ನಿರಂತರವಾಗಿ ಮುಂದುವರೆಸಬೇಕು. ಇನ್ನಷ್ಟು ಮಂದಿಗೆ ಮಾಹಿತಿ ಕೊಟ್ಟು ಕೊನೆ ಕೊಯ್ಯುವ ಸಮಸ್ಯೆ ಪರಿಹರಿಸುವುದಕ್ಕೆ ಕೈ ಜೋಡಿಸಬೇಕು ಎಂದರು.
ನಿರ್ದೇಶಕ ಸೀತಾರಾಮ ಹೆಗಡೆ, ದೋಟಿಯಲ್ಲಿ ಕೊನೆ ಕೊಯ್ಯುವುದನ್ನು ಕಲಿತರೆ ಆದಾಯವೂ ಬರುತ್ತದೆ. ಕೊನೆ ಕೊಯ್ಲು ಸಮಯಕ್ಕೆ ಮುಗಿಯುತ್ತದೆ ಎಂದರು.
ಟಿಎಸ್‍ಎಸ್ ನಿರ್ದೇಶಕರಾದ ಶಶಾಂಕ ಹೆಗಡೆ, ಬಾಲಚಂದ್ರ ಹೆಗಡೆ, ದೋಟಿ ತಯಾರಕ ಕಂಪನಿಯ ಅಭಿಜಿತ್ ಕತ್ರಿ ಉಪಸ್ಥಿತರಿದ್ದರು. ರವಿಚಂದ್ರ ಹೆಗಡೆ ನಿರೂಪಿಸಿದರು.
ದೋಟಿ ಆಯ್ಕೆಯೇ ಮುಖ್ಯ..
ದೋಟಿಯಿಂದ ಬೆಳೆ ರಕ್ಷಣೆ ಹಾಗು ಕೊಯ್ಲು ಎರಡು ಸಮಸ್ಯೆ ಪರಿಹಾರವಾಗುತ್ತದೆ. ಸಬ್ಸಿಡಿ ಆಸೆಗೆ ದೋಟಿ ಕೊಳ್ಳದೇ ಒಳ್ಳೆಯ ಗುಣಮಟ್ಟದ ದೋಟಿಯನ್ನು ಖರೀದಿಸಬೇಕು. ಸುಮಾರು ಆರು ಮುಕ್ಕಾಲು ಕೆಜಿ ದೋಟಿ ಹೊಂದಬೇಕು. ಅದಕ್ಕೆ 12ಪೈಪ್ ಇರಬೇಕು. ಪೈಪ್ ಕಡಿಮೆ ಇದ್ದಷ್ಟು ಕೊನೆ ಕೊಯ್ಯುವಾಗ ಬಳಕುವುದು ಕಡಿಮೆಯಾಗುತ್ತದೆ. ಕೊಯ್ಯಲು ಆರೂವರೆ ಇಂಚಿನ 150ಗ್ರಾಂ ತೂಕದ ಕತ್ತಿ ಹೊಂದಬೇಕು. ಬಹಳ ಚೂಪಾಗಿ ಇರುವಂತೆ ನೋಡಿಕೊಳ್ಳಬೇಕು. ಗೊನೆಗೆ ಕತ್ತಿ ಹಾಕುವಾಗ ಮೇಲ್ಭಾಗದ ಸಿಂಗಾರ ಹಾಳಾಗದಂತೆ ಎಚ್ಚರ ವಹಿಸಬೇಕು. ಕಲಿಕೆಗೆ ಒಂದು ಹಂಗಾಮು ಬೇಕಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಉಮಾನಂದ ಭಟ್ಟ ಕೊಡ್ಲಳ್ಳಿ ತಿಳಿಸಿದರು.
ಬಾಡಿಗೆಗೂ ಕೊಡ್ತೆವೆ….ಸಾಲ ನೀಡ್ತೆವೆ….
ಅಡಕೆ ಬೆಳೆಗಾರರಿಗೆ ಅನೇಕ ವರ್ಷಗಳಿಂದ ಮರ ಹತ್ತಿ ಕೊನೆ ಕೊಯ್ಯುವುದರಲ್ಲಿ ಸಮಸ್ಯೆಯಾಗುತ್ತಿದೆ. ಈಗ ಕಾರ್ಬನ್ ಫೈಬರ್ ದೋಟಿ ಬಂದಿದ್ದು ವರದಾಯಕವಾಗಿದೆ. ರೈತರಿಗೆ ಇಂಥ ಉಪಕರಣ ಲಭ್ಯವಾಗಿ ತರಬೇತಿ ಪಡೆದು ಕೊನೆ ಕೊಯ್ಲು ಹಾಗೂ ಮದ್ದು ಸಿಂಪಡಣೆ ಸುಲಭವಾಗಲಿ ಎಂದು ಸಂಸ್ಥೆ ಉದ್ದೇಶಿಸಿದೆ ಎಂದು ಟಿಎಸ್‍ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ತಿಳಿಸಿದರು. ಇಂಥ ತರಬೇತಿ ಶಿಬಿರವನ್ನು ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮೂರ್ನಾಲ್ಕು ಸಲ ಏರ್ಪಡಿಸಿ ಕನಿಷ್ಟ 500ಮಂದಿ ತರಬೇತಿ ಹೊಂದುವಂತಾಗಬೇಕು ಎಂಬ ಗುರಿಯಿದೆ. ಸಣ್ಣ ಹಿಡುವಳಿ ಇರುವ ಯುವಕರು ಇದನ್ನು ಉದ್ಯೋಗ ಮಾಡಿಕೊಂಡರೆ ವರ್ಷಕ್ಕೆ 1.5ಲಕ್ಷ ದುಡಿಯಬಹುದು. ಆರ್ಥಿಕವಾಗಿ ಚೇತರಿಸಿಕೊಳ್ಳಬಹುದು. ಕಾರ್ಬನ್ ದೋಟಯನ್ನು ಬಾಡಿಗೆ ಕೊಡುವ, ಉದ್ಯೋಗ ಮಾಡುವವರಿಗೆ ದೋಟಿಯನ್ನು ಲೋನ್ ಮೂಲಕ ಕೊಟ್ಟು ರೈತ ಸದಸ್ಯರ ತೋಟದಲ್ಲಿ ಕೆಲಸ ಕೊಡಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಅವರು ವಿವರಿಸಿದರು.