ಹೊನ್ನಾವರ : ಪ್ರಜಾಪ್ರಭುತ್ವ ದಿನದಂದೇ ಪ್ರಜೆಗಳ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಲಾಗಿದೆ ಎನ್ನುವ ಆರೋಪ ಟೊಂಕ ಉದ್ದೇಶಿತ ವಾಣಿಜ್ಯ ಬಂದರು ಕಾಮಗಾರಿ ನಡೆಸುತ್ತಿರುವ ಪ್ರದೇಶದ ಸ್ಥಳೀಯ ನಿವಾಸಿಗರಿಂದ ಕೇಳಿ ಬಂದಿದೆ.
ತಾಲೂಕಿನ ಕಾಸರಕೋಡ್ ಟೊಂಕಾದಲ್ಲಿ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಕಚ್ಚಾ ರಸ್ತೆ ನಿರ್ಮಾಣ ಹಿನ್ನಲೆ ಜ.24 ರಿಂದ ಪೊಲೀಸ್ ಬಲದೊಂದಿಗೆ ಕಾಮಗಾರಿ ಪ್ರಾರಂಭಿಸಿರುವ ಖಾಸಗಿ ಕಂಪನಿ ಬುಧವಾರ ಮುಂಜಾನೆ ಸಮುದ್ರಕ್ಕೆ ನಿರ್ಮಿಸಿರುವ ತಡೆಗೋಡೆಯ ಕಲ್ಲುಗಳನ್ನು ತೆಗೆಯಲು ಮುಂದಾಗಿತ್ತು. ಹಲವಾರು ವರ್ಷಗಳಿಂದ ಕಡಲಕೊರತೆ ತಡೆಯುವುದಕ್ಕೆ ಹಾಕಿರುವ ಕಲ್ಲುಗಳನ್ನು ತೆಗೆಯದಂತೆ ಸ್ಥಳೀಯ ನಿವಾಸಿಗಳು ಮನವಿಗೆ ಮುಂದಾದಾಗ ಪೆÇಲೀಸರು ಏಕಾಏಕಿ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಲು ಹೋದ ಸಂದರ್ಭದಲ್ಲಿ ಲಾಠಿ ಏಟು ತಿಂದ ಸ್ಥಳೀಯ ಮೀನುಗಾರ ತಮ್ಮ ಮೇಲೆ ಆಗಿರುವ ದೌರ್ಜನ್ಯದ ಕುರಿತು ವಿಡಿಯೋ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಭಾರತದ ಸಂವಿಧಾನದ ಬಗ್ಗೆ ದೊಡ್ಡ ದೊಡ್ಡ ವೇದಿಕೆಯಲ್ಲಿ ಉದ್ದುದ್ದ ಭಾಷಣ ಬಿಗಿಯುವ ಅಧಿಕಾರಿಗಳು ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಬೇಕಾದ ಇಲಾಖೆ ಭಾರತದ ಪ್ರಜಾಪ್ರಭುತ್ವದ ದಿನದಂದೇ ತಮ್ಮ ಹಕ್ಕುಗಳನ್ನು ಕೇಳಲು ಬಂದವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ.
ಕಾಸರಕೋಡ್ ನಲ್ಲಿ ಬಡ ಮೀನುಗಾರರ ಮೇಲೆ ಲಾಠಿಚಾರ್ಜ ವಿಷಯ ಗುಲ್ಲೆಬ್ಬುತ್ತಿದ್ದಂತೆ,ಇತ್ತ ಪೊಲೀಸ್ ಇಲಾಖೆ ಈ ಘಟನೆ ಸುಳ್ಳು ಎಂದು ಸ್ಪಷ್ಟನೆ ನೀಡಲು ಮುಂದಾಗುವ ಮೂಲಕ ಲಾಠಿ ಪ್ರಕರಣಕ್ಕೆ ತೆರೆ ಎಳೆಯಲು ಮುಂದಾಯಿತು. ಲಾಠಿ ಏಟು ತಿಂದ ವ್ಯಕ್ತಿಯ ಫೋಟೋ ಮೇಲೆ ಫೇಕ್ ಎಂದು ಬರೆದು ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ.