ಅಂಕೋಲಾ : ದಿನಕರ ವೇದಿಕೆ ಉತ್ತರ ಕನ್ನಡ ಇದು ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ವೇದಿಕೆಯ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಪಟ್ಟಣದ ಪಿ.ಎಂ.ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ವೇದಿಕೆಯ ಕಾರ್ಯದರ್ಶಿ ಸಂದೇಶ ಉಳ್ಳಿಕಾಶಿಯವರು ಸರ್ವರನ್ನು ಸ್ವಾಗತಿಸಿದರು ಹಾಗೂ ಹಿಂದಿನ ವರ್ಷಗಳಲ್ಲಿ ಆದ ಕಾರ್ಯಕ್ರಮಗಳ ಕುರಿತು ಮತ್ತು ಆದಂತಹ ನಡಾವಳಿಗಳ ಕುರಿತು ವರದಿ ವಾಚಿಸಿದರು. ವೇದಿಕೆಯ ಕಾರ್ಯಾಧ್ಯಕ್ಷ ಸಂತೋಷ್ ನಾಯಕ ಹಿಂದಿನ ವರ್ಷಗಳ ಲೆಕ್ಕ ಪತ್ರಗಳನ್ನು ಹಾಗೂ ಈ ವರ್ಷದ ಅಂದಾಜು ಪತ್ರಿಕೆಯನ್ನು ಸಭೆಯ ಮುಂದಿಟ್ಟರು.
ದಿನಕರ ವೇದಿಕೆಯ ಅಧ್ಯಕ್ಷರಾದ ರವೀಂದ್ರ ಕೇಣಿ ಮಾತನಾಡಿ ವೇದಿಕೆಯ ಆಡಳಿತ ಮಂಡಳಿಗೆ ಸೇರ್ಪಡೆಯಾಗಬೇಕಾದ ಸದಸ್ಯರ ಮಾಹಿತಿಯನ್ನು ಮತ್ತು ದಿನಕರ ವೇದಿಕೆ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಸಭೆಯ ಬಳಿಕ ವೇದಿಕೆಯಲ್ಲಿ 75 ವರ್ಷ ಪೂರೈಸಿದ ಹಿರಿಯ ಆಜೀವ ಸದಸ್ಯರಾದ ವಿಶ್ರಾಂತ ಪ್ರಾಚಾರ್ಯ ಪ್ರೋ. ವಿ ಆರ್ ವೆರ್ಣೇಕರ್ ಹಾಗೂ ಗುತ್ತಿಗೆದಾರ ಮತ್ತು ಸಮಾಜ ಸೇವಕ ವಸಂತ್ ಖೇಮು ನಾಯ್ಕ, ಬಹು ಮುಖ ಪ್ರತಿಭೆಯ ನಿವೃತ್ತ ಶಿಕ್ಷಕ ಎಂ.ಎಚ್.ಗೌಡ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೋ.ವಿ. ಆರ್.ವೆರ್ಣೇಕರ್ ನಾವು ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ ಎನ್ನುವುದುದಕ್ಕೆ ಇಂದಿನ ಸನ್ಮಾನವೇ ಸಾಕ್ಷಿ, ತಾವು ವೃತ್ತಿಯಲ್ಲಿ ಇರುವಾಗ ತೋರಿಸಿದ ಬದ್ಧತೆಯು ನಿವೃತ್ತಿಯ ನಂತರವೂ ಮುಂದುವರೆಸಿಕೊಂಡು ಬಂದಿರುವುದಾಗಿ ತಿಳಿಸಿದರು.
ವಸಂತ ಖೇಮು.ನಾಯ್ಕ ತಮ್ಮ ಅನುಭವಗಳನ್ನು ಸಭಿಕರೊಡನೆ ಹಂಚಿಕೊಂಡರು.
ಎಂ. ಎಚ್. ಗೌಡರವರು ತಾನು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದರು ಸಹ ತನ್ನನ್ನು ಗುರುತಿಸಿರಲಿಲ್ಲ ಆದರೆ ದಿನಕರ ವೇದಿಕೆ ನನ್ನ ಸಾಧನೆಯನ್ನೂ ಗುರುತಿಸಿ ಗೌರವಿಸಿರುವುದು ನನಗೆ ಖುಷಿ ಕೊಟ್ಟಿದೆ ಎಂದರು.
ಡಾ. ಅರ್ಚನಾ ನಾಯಕ ಹಾಗೂ ಸಂತೋಷ ನಾಯಕ ಸನ್ಮಾನಿತರ ಪರಿಚಯ ಮಾಡಿದರು.
ಸನ್ಮಾನ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಡಾ.ಆರ್.ಜಿ.ಗುಂದಿ ದಿನಕರ ವೇದಿಕೆಯು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಇಂದು ಸನ್ಮಾನಿತರಾದ ಪ್ರತಿಯೊಬ್ಬರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಸ್ಮರಣಿಯವಾದುದು, ಬರುವ ದಿನಗಳಲ್ಲಿ ವೇದಿಕೆಯು ತನ್ನ ಕಾಯ9ಚಟುವಟಿಕೆಗಳ ಮೂಲಕ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೋ.ಮೋಹನ ಹಬ್ಬುರವರು ಪ್ರತಿಯೊಬ್ಬರು ಸಣ್ಣತನವನ್ನು ತೊರೆದು ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಸಮಾಜದಲ್ಲಿ ಪ್ರೀತಿ, ಪ್ರೇಮ ವಿಶ್ವಾಸಗಳ ಮೂಲಕ ಸಮಾಜ ಕಟ್ಟಬೇಕಾಗಿದೆ, ಈ ಕೆಲಸ ದಿನಕರ ವೇದಿಕೆಯಿಂದ ಆಗಲಿ ಎಂದರು. ಮುಂದುವರೆದು ವೇದಿಕೆಯು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ದಿನಕರ ವೇದಿಕೆಯ ಸಂಘಟನಾ ಕಾರ್ಯದರ್ಶಿ ರವಿ ಪೂಜಾರಿಯವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಉಪಾಧ್ಯಕ್ಷ ಎನ್.ವಿ.ರಾಠೋಡ ವಂದಿಸಿದರು.