ಸಿದ್ದಾಪುರ: ಸ್ಥಳೀಯ ತಾಪಂ ಸಭಾಂಗಣದಲ್ಲಿ ತಾಪಂ ಸಾಮಾನ್ಯ ಸಭೆ ಗುರುವಾರ ನಡೆಯಿತು.
ಕ್ಷೇತ್ರಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾತನಾಡಿ ತಾಲೂಕಿನಲ್ಲಿ ಮಕ್ಕಳಲ್ಲಿ ಹೆಚ್ಚು ಕರೊನಾ ಪ್ರಕರಣ ಕಾಣಿಸಿಕೊಳ್ಳುತ್ತಿರುವುದರಿಂದ ಹೆಚ್ಚು ಪ್ರಕರಣ ಕಾಣಿಸಿಕೊಂಡ 4 ಶಾಲೆಗಳಿಗೆ ಜ.31ರವರೆಗೆ ರಜೆ ನೀಡಲಾಗಿದೆ. ರಜೆ ನೀಡಲಾದ ಶಾಲೆಯ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಡೆಸುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ತಾಲೂಕು ಅಡಳಿತ ವೈದ್ಯಾಧಿಕಾರಿ ಡಾ ಲಕ್ಷ್ಮೀಕಾಂತ ನಾಯ್ಕ ಮಾತನಾಡಿ ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಕರೊನಾ ಸಾಂಕ್ರಮಿಕ ರೋಗ ಹೆಚ್ಚಿರುವುದರಿಂದ ಜನತೆ ಹೆಚ್ಚು ಜಾಗೃತರಾಗಿರಬೇಕು. ಈಗಾಗಲೇ ತಾಲೂಕಿನಲ್ಲಿ ಮೊದಲ ಲಸಿಕೆ ಶೇ.109ರಷ್ಠು ನೀಡಲಾಗಿದೆ. ಎರಡನೇ ಲಸಿಕೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿದ್ದು ಜನತೆ ಲಸಿಕೆ ಪಡೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಎರಡನೇ ಹಂತದ ಕರೊನಾ ಲಸಿಕೆ ಪಡೆದುಕೊಳ್ಳುವುದಕ್ಕೆ ಕ್ಯಾದಗಿ, ಬಿಳಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜನರೇ ಹೆಚ್ಚಿದ್ದಾರೆ. ತಾಲೂಕಿನಲ್ಲಿ ನಿನ್ನೆಯವರೆಗೆ 225 ಕರೊನಾ ಪಾಸಿಟಿವ್ ಪ್ರಕರಣ ಇದ್ದು ಇದರಲ್ಲಿ 172 ಗ್ರಾಮೀಣ ಹಾಗೂ 53 ಪ್ರಕರಣ ಪಟ್ಟಣ ಪ್ರದೇಶದಲ್ಲಿದೆ.ತಾಲೂಕಿನಲ್ಲಿ ಶೇ.93ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಮಂಚೂಣಿಯಲ್ಲಿರುವ ಕರೊನಾ ಸೇನಾನಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರಕಾಶ ಪುರಾಣಿಕ ಮಾತನಾಡಿ ದಿನದಿಂದ ದಿನಕ್ಕೆ ಎಮರ್ಜನ್ಸಿ ಒಪಿಡಿ ಹೆಚ್ಚಾಗುತ್ತಿದೆ. ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಇಲ್ಲ. ನೂತನವಾಗಿ 500 ಲೀಟರ್ ಆಕ್ಷಿಜನ್ ಪ್ಲಾಂಟ್ ಸಿದ್ದಗೊಂಡಿದೆ. ವಿದ್ಯುತ್ ಸಂಪರ್ಕ ನೀಡುವುದು ಮಾತ್ರ ಬಾಕಿ ಇದೆ ಎಂದು ಹೇಳಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕಾನಂದ ಹೆಗಡೆ ಮಾತನಾಡಿ ತಾಲೂಕಿನಲ್ಲಿ 41ಸಾವಿರದಷ್ಟು ಜಾನುವಾರುಗಳಿದ್ದು ಅವುಗಳಲ್ಲಿ ಈಗಾಗಲೇ 39ಸಾವಿರ ಜಾನುವಾರುಗಳಿಗೆ ಕಾಲು-ಬಾಯಿ ಲಸಿಕೆ ನೀಡಲಾಗಿದೆ. ಬಿಡಾಡಿ ಜಾನುವಾರುಗಳಿಗೆ ಕಾಲು-ಬಾಯಿ ಲಸಿಕೆ ನೀಡುವುದಕ್ಕೂ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಕೃಷಿ, ತೋಟಗಾರಿಕೆ, ಅಕ್ಷರದಾಸೋಹ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.ತಾಪಂ ಇಒ ಪ್ರಶಾಂತರಾವ್ ಹಾಗೂ ವ್ಯವಸ್ಥಾಪಕ ದಿನೇಶ ಉಪಸ್ಥಿತರಿದ್ದರು.