ಮುಂಡಗೋಡ: ನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ಜೀವನ ನಡೆಸಬೇಕು. ಸಂವಿಧಾನವು ನಮಗೆ ಮತ ಚಲಾಯಿಸುವ ಹಕ್ಕನ್ನು ನೀಡಿದೆ. ಸಂವಿಧಾನದಲ್ಲಿ 18 ವರ್ಷ ಹಾಗೂ ಮೇಲ್ಪಟ್ಟವರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಚುನಾವಣಾ ಸಮಯದಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರು ಮತವನ್ನು ಹಾಕಿ ಹಕ್ಕನ್ನು ಚಲಾಯಿಸಬೇಕು ಎಂದು ಸಿವಿಲ್ ನ್ಯಾಯಾಧೀಶ ಕೇಶವ ಕೆ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಕಾನೂನು ಸೇವಾ ಸಮಿತಿ ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಮತವನ್ನು ಚಲಾಯಿಸಬೇಕಾಗಿದ್ದು ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಸಿವಿಲ್ ನ್ಯಾಯಾಧೀಶ ಕೇಶವ ಕೆ ಅಧಿಕಾರಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಸಂಕಲ್ಪವನ್ನು ಬೋಧಿಸಿದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿದರು.
ತಾ.ಪಂ. ಇಒ ಪ್ರವೀಣ ಕಟ್ಟಿ, ಬಿಇಒ ವಿ.ವಿ ನಡುವಿನಮನಿ, ಸರಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯೆ ಇಂದಿರಾ ಬಾಗಲಕೋಟೆ, ಗ್ರೇಡ್2 ತಹಶೀಲ್ದಾರ ಜಿ.ಬಿ ಭಟ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಡಿ. ಗೋಪಾಲಕೃಷ್ಣ, ಪ್ರಬಾರ ಸಿಡಿಪಿಒ ದೀಪಾ ಬಗೇರ, ರಾಘವೇಂದ್ರ ಗಿರಡ್ಡಿ, ಶ್ರೀಕಾಂತ, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.