
ಶಿರಸಿ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಭವ್ಯ ಮಾಡುವ ಕಾರ್ಯ ಬಹಳ ವೇಗದಿಂದ ನಡೆಯುತ್ತಿದೆ. ಕಳೆದ ಅಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಭೂಮಿಪೂಜೆ ನಡೆಯಲ್ಪಟ್ಟ ನಂತರ ನಿರ್ಮಾಣ ಕಾರ್ಯ ಉತ್ತಮ ರೀತಿಯಲ್ಲಿ ಸಾಗಿದೆ ಎಂದು ವಿಶ್ವಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಹಾಗು ಶ್ರೀರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ ನಾಗರಕಟ್ಟೆ ಹೇಳಿದರು.
ಶನಿವಾರ ನಗರದ ಟಿಎಮ್ಎಸ್ ಸಭಾಂಗಣಕ್ಕೆ ಆಗಮಿಸಿದ್ದ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಕಟ್ಟಡದ ನಿರ್ಮಾಣ ಕಾರ್ಯದ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಈಗಿರುವ ಮಂದಿರದ ಸ್ಥಳದಲ್ಲಿ ಬಿದ್ದಿದ್ದ ಪುರಾತನ ಕಟ್ಟಡಗಳ ಅವಶೇಷದ ಕಾರಣಕ್ಕೆ ಅಡಿಪಾಯ ಹಾಕಲು ಗಟ್ಟಿ ಮಣ್ಣು ಸಿಗಲಿಲ್ಲ. ರಾಷ್ಟ್ರದ 5 ಐಐಟಿಗಳ ತಂತ್ರಜ್ಞರ ಸಲಹೆಯಂತೆ 40 ಅಡಿ ಮಣ್ಣು ತೆಗೆದು ಅಡಿಪಾಯ ಹಾಕಲು ನಿರ್ಧರಿಸಲಾಯಿತು. 400 ಉದ್ದ, 300 ಅಡಿ ಅಗಲ ಮತ್ತು 40 ಅಡಿಗಳಷ್ಟು ಆಳದಲ್ಲಿ ಮಂದಿರದ ಅಡಿಪಾಯ ಕೆಲಸ ನಡೆದಿದೆ. ಪ್ರಸ್ತುತ ನೆಲದಿಂದ 17 ಅಡಿಯಷ್ಟು ಕೆಲಸ ಸಾಗಿದ್ದು, ಅದಾದ ನಂತರ 20 ಅಡಿಯಷ್ಟು ಪ್ಲಿಂಥ್ ನಿರ್ಮಾಣ ಆಗಬೇಕಿದೆ. ಎಪ್ರಿಲ್ 2022 ರ ಹೊತ್ತಿಗೆ ಬಹುತೇಕ ಪ್ಲಿಂಥ್ ನಿರ್ಮಾಣದ ವರೆಗೆ ಕೆಲಸ ಮುಗಿಯಲಿದೆ. ನಂತರ ಬನ್ಸಿಪಹಾಡ್ಪುರ್ ಪಿಂಕ್ ಸ್ಟೋನ್ ಮೂಲಕ ಕಲ್ಲಿನ ಕೆಲಸ ನಡೆಯಲಿದ್ದು, ನಮ್ಮ ಯೋಜನೆಯಂತೆ 2023 ಡಿಸೆಂಬರ್ ವೇಳೆಗೆ ನೂತನ ಮಂದಿರದಲ್ಲಿ ಪ್ರಭು ಶ್ರೀರಾಮನ ವಿಗ್ರಹನಿಟ್ಟು ಪೂಜೆ ನಡೆಯಬೇಕು. ಕಟ್ಟಡ ಪೂರ್ಣ ನಿರ್ಮಾಣಕ್ಕೆ ಮತ್ತಷ್ಟು ಸಮಯದ ಅಗತ್ಯತೆ ಇರುತ್ತದಾದರೂ, ಮಂದಿರದ ಗರ್ಭಗುಡಿ ಸೇರಿ ಮತ್ತಿತರ ಸ್ಥಳದ ನಿರ್ಮಾಣ ಕೆಲಸ ಮುಗಿಯಲಿದೆ.
ಎಲ್ಲರ ಸಹಕಾರದಿಂದ ಕಟ್ಟಡ ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಎಲ್ & ಟಿ ಕಂಪನಿ ಮತ್ತು ಟಾಟಾ ಕನ್ಸಲ್ಟನ್ಸಿ ಇಂಜಿನಿಯರ್ ಸುಪರ್ವಿಸನ್ ನಲ್ಲಿ ಮತ್ತು ಆರ್ಕಿಟೆಕ್ಟ್ ಚಂದ್ರಕಾಂತ ಸೋಂಪೂರ ಮುಂದಾಳತ್ವದಲ್ಲಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ಅವರು ಹೇಳಿದರು.
ಮಂದಿರದ ವಿಶಾಲತೆ ಮತ್ತು ಭವ್ಯತೆಯನ್ನು ಚೆನ್ನಾಗಿ ಮಾಡುವ ದೃಷ್ಟಿಯಿಂದ ಮಂದಿರದ ಪೂರ್ವ ಮತ್ತು ಪಶ್ಚಿಮ ದಿಕ್ಕಿನ ಸುತ್ತಮುತ್ತಲಿನಲ್ಲಿ ಒಂದಷ್ಟು ಭೂಮಿಯನ್ನು ಖರೀದಿ ಮಾಡುತ್ತಿದ್ದೇವೆ. ಇದರಿಂದ ವ್ಯವಸ್ಥೆಗೆ ಅನುಕೂಲವಾಗುತ್ತದೆ. ಮಂದಿರದ ಪರಿಸರದಲ್ಲಿ ಮ್ಯೂಸಿಯಂ ಸೇರಿದಂತೆ ಅನೇಕ ವ್ಯವಸ್ಥೆಗಳು ಇರಲಿದ್ದು, ಆಗಮಿಸಿದ ಭಕ್ತಾದಿಗಳಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸಾಕಷ್ಟು ಯೋಚಿಸಿ, ಯೋಜನೆ ಮಾಡಲಾಗಿದ್ದು, ಮುಂದಿನ ವರ್ಷ ಆ ಕೆಲಸ ನಡೆಯಲಿದೆ. ಮಂದಿರದ ಪೂರ್ಣ ಕೆಲಸ ಮುಗಿಯಲು ಕನಿಷ್ಟ ನಾಲ್ಕೈದು ವರ್ಷಗಳು ಬೇಕಾಗಬಹುದು ಎಂದು ಅವರು ಹೇಳಿದರು.