ಶಿರಸಿ: ಎಂ ಇ ಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ೭೩ ನೇ ಗಣರಾಜ್ಯೋತ್ಸವವನ್ನು ಪ್ರಾಚಾರ್ಯೆ ಡಾ. ಕೋಮಲಾ ಭಟ್ ಅವರು ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತದಲ್ಲಿ ಪ್ರಜಾಸತ್ತಾತ್ಮಕ ಆಡಳಿತ ಬಂದ ನಂತರ ನಮ್ಮೆಲ್ಲರ ಭಾವನಾತ್ಮಕ ಏಕತೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಿಶ್ವದ ಅನೇಕ ರಾಷ್ಟ್ರಗಳಲ್ಲಿನ ಅರಾಜಕತೆಯನ್ನು ಗಮನಿಸಿದಲ್ಲಿ ಭಾರತ ಗಣರಾಜ್ಯವು ಮೌಲ್ಯವನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವದು ಸಂತಸದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ರೆಡ್ ಕ್ರಾಸ್ ಘಟಕ ದಿಂದ ಎಲ್ಲರಿಗೂ ಎನ್ ೯೫ ಮುಕಗವಸನ್ನು ನೀಡಲಾಯಿತು.ನಂತರ ಕಾಲೇಜಿನ ಸಭಾಬವನದಲ್ಲಿ ನಿವೃತ್ತ ವಿಂಗ್ ಕಮ್ಯಾಂಡರ್ ಮುರಾರಿ ಭಟ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರತಿಫಲದ ಬಗ್ಗೆ ಚಿಂತಿಸದೇ ನಿಮ್ಮ ಕರ್ತವ್ಯದಲ್ಲಿ ಶ್ರದ್ಧೆಯಿಂದ ಮುನ್ನಡೆಯಲು ಕಲಿಯಿರಿ, ಆಗ ಮಾತ್ರ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿ ಜೀವನ ಅತೀ ಅಮೂಲ್ಯವಾದುದು,ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಅಗತ್ಯವಾದ ಕೌಶಲಯುತವಾದ ಪೂರ್ವತಯಾರಿಯಲ್ಲಿ ತೊಡಗಬೇಕು. ದೇಶದ ಉತ್ತಮ ಪ್ರಜೆಯಾಗುವಲ್ಲಿ ದೇಶದ ಬಗ್ಗೆ, ದೇಶಸೇವೆಯ ಬಗ್ಗೆ ಯುವಜನತೆಯಲ್ಲಿ ಜಾಗೃತಪ್ರಜ್ಞೆ ಮೂಡಬೇಕಿದೆ. ದೇಶ ನಮಗೇನು ನೀಡಿದೆ ಎಂಬುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಬೇಕಿದೆ ಎಂಬ ಚಿಂತನೆಯಲ್ಲಿ ವಿದ್ಯಾರ್ಥಿಗಳು ತೊಡಗಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣ, ಕ್ರಿಯಾಶೀಲತೆಯನ್ನ ರೂಢಿಸಿಕೊಳ್ಳಿ. ಸಿಕ್ಕಂತ ಪ್ರತಿ ಅವಕಾಶದ ಸದುಪಯೋಗಪಡಿಸಿಕೊಳ್ಳಿ. ಆ ಮೂಲಕ ಜೀವನದಲ್ಲಿ ಸಫಲತೆ ಹೊಂದಬಹುದು.ದೇಶಸೇವೆ ಎಂದರೆ ಸೈನ್ಯಕ್ಕೆ ಸೇರಬೇಕೆಂದಿಲ್ಲ, ಭಾರತೀಯ ರಕ್ಷಣಾ ವ್ಯವಸ್ಥೆಯ ಬಗೆಗಿನ ಮೂಲಭೂತ ಮಾಹಿತಿಯೊಂದಿಗೆ ಹೆಮ್ಮೆ ಗೌರವವನ್ನು ಹೊಂದಿದ್ದರೂ ಸಾಕು, ದೇಶಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದರು. ಭಾರತೀಯ ರಕ್ಷಣಾ ವ್ಯವಸ್ಥೆಯಲ್ಲಿನ ತಮ್ಮ 24 ವರ್ಷಗಳ ಸುದೀರ್ಘ ಸೇವೆಯನ್ನು ನೆನಪಿಸುತ್ತಾ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯೆ ಕೋಮಲಾ ಭಟ್ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವ ಶುಭಾಶಯ ಕೋರಿ ಮಾತನಾಡುತ್ತಾ, ತಮ್ಮ ಜೀವನವನ್ನು ದೇಶಸೇವೆಗೆ ಮುಡಿಪಾಗಿಟ್ಟಿರುವ ವಿಂಗ್ ಕಮಾಂಡರ್ ಶ್ರೀ ಮುರಾರಿ ಭಟ್ರವರನ್ನು ಕಾಲೇಜಿಗೆ ಕರೆಸಿರುವುದು ಹೆಮ್ಮೆಯ ಸಂಗತಿ. ಅವರ ಆದರ್ಶಗಳನ್ನು ಅರಿಯುವ ಮೂಲಕ ನಾವೂ ಕೂಡ ರಾಷ್ಟ್ರಭಕ್ತಿಯನ್ನ ಬೆಳೆಸಿಕೊಳ್ಳಬೇಕಿದೆ. ಅವರ ಜೀವನ ಸಾಧನೆಗಳು ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂಬುದೇ ನಮ್ಮ ಆಶಯ ಎಂದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರವಿ ಕೊಳೆಕರ್ ನಿರ್ವಹಿಸಿದರು. ಕೊನೆಯಲ್ಲಿ ಪ್ರೊ.ಎಮ್ ಎನ್ ಭಟ್ ವಂದಿಸಿದರು.