ಅಂಕೋಲಾ : ಉ.ಕ ಜಿಲ್ಲೆಯಲ್ಲಿ ರಾತ್ರಿ ಕಫ್ರ್ಯೂ ಹೇರಿಕೆಯಿಂದ ವಿನಾಯಿತಿ ನೀಡಿ ನಾಟಕ ಯಕ್ಷಗಾನ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕೆಂದು ಉ.ಕ ಜಿಲ್ಲಾ ನೂತನ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ತಾಲೂಕ ರಂಗಭೂಮಿ ಕಲಾವಿದರ ವೇದಿಕೆ ವತಿಯಿಂದ ಅಂಕೋಲಾದಲ್ಲಿ ಮನವಿ ಸಲ್ಲಿಸಿದರು.
2018-19 ರಲ್ಲಿ ಚುನಾವಣೆ ನೀತಿಸಂಹಿತೆ ಮತ್ತು 2020 ರಿಂದ 2022 ಕೋವಿಡ ಹೀಗೆ ಸತತ 5 ವರ್ಷಗಳಿಂದ ನಾಟಕ, ಯಕ್ಷಗಾನ ಮುಂತಾದ ಯಾವುದೇ ಕಾರ್ಯಕ್ರಮಗಳಿಲ್ಲದೆ ಕಲಾವಿದರು, ರಂಗಸಜ್ಜಿಕೆ, ಸಂಗೀತ, ಹಿಮ್ಮೇಳ, ಲೈಟಿಂಗ್, ಸೌಂಡ್ ಸಿಸ್ಟಂ, ವಾದ್ಯದವರು ಮುಂತಾದ ಅವಲಂಬಿತರು ಅತಂತ್ರರಾಗಿ ಜೀವನ ನಿರ್ವಹಣೆ ಮಾಡುವದು ತೀರ ಕಷ್ಟಕರವಾಗಿದೆ. ಮಕ್ಕಳ ಶಾಲಾ ಫೀ ತುಂಬಲಾಗದೆ ನಮ್ಮ ಮಕ್ಕಳು ಶಿಕ್ಷಣದಿಂದಲೂ ವಂಚಿತರಾಗುವಂತಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಖರೀದಿಸಿದ ಲೈಟಿಂಗ್ ಸೌಂಡ್ ಸಿಸ್ಟಂ ಪರಿಕರಗಳ ಬಳಕೆಯಾಗದೆ ಹಾಳಾಗಿವೆ ಮತ್ತು ಹಾಳಾಗುತ್ತಿವೆ. ಸಾಲ ನೀಡಿದವರು ಮನೆ ಬಾಗಿಲಿಗೆ ಬರುತ್ತಿದ್ದು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ವರ್ಷಕ್ಕೆ ಒಂದು ಬಾರಿ ನಡೆಯುವ ದೇವಸ್ಥಾನಗಳ ವಾರ್ಷಿಕ ಪೂಜೆ ನಿಮಿತ್ತ ನಡೆಯುವ ಕಾರ್ಯಕ್ರಮಗಳ ಹಿಂದೆ ಅನೇಕ ಅವಲಂಬಿತರು ಜೀವನ ನಡೆಸುತ್ತಾರೆ. ಇದೀಗ ಮತ್ತೆ ರಾತ್ರಿ ಕಫ್ರ್ಯೂ ಹೇರಿಕೆಯಿಂದಾಗಿ ಕಾರ್ಯಕ್ರಮಗಳನ್ನೇ ಅವಲಂಬಿಸಿದ ನಾವು ಅಕ್ಷರಶಃ ಬೀದಿಗೆ ಬಂದಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆ ಅಧ್ಯಕ್ಷ ನಾಗರಾಜ ಎಸ್. ಜಾಂಬಳೇಕರ ಕಲಾವಿದರ ವೇದಿಕೆಯ ಉಪಾಧ್ಯಕ್ಷ ಸುಜೀತ ನಾಯ್ಕ, ಧನಂಜಯ ನಾಯ್ಕ ಕುಂಬಾರಕೇರಿ, ಮೋಹನ ನಾಯ್ಕ, ವಿನಾಯಕ ನಾಯ್ಕ, , ದಾಮು ನಾಯ್ಕ ಕಲಾವಿದರು ಇದ್ದರು.
ಕಲಾವಿದರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಾಟಕ ಮತ್ತು ಇತರ ಮನರಂಜನಾ ಕಾರ್ಯಕ್ರಮಗಳಿಗೆ ಸಂಜೆ 6 ರಿಂದ 11 ರವರೆಗೆ ಪರವಾನಿಗೆ ನೀಡಲಾಗುವುದು. ತಕ್ಷಣವೇ ತಹಶಿಲ್ದಾರರಿಗೆ ಪರವಾನಿಗೆ ನೀಡಲು ಸೂಚಿಸಲಾಗುವುದು ಎಂದು ಕಲಾವಿದರಿಗೆ ತಿಳಿಸಿದ್ದಾರೆ. ಸಚಿವರ ಸ್ಪಂದನೆಗೆ ಕಲಾವಿದರ ವೇದಿಕೆ ಅಭಿನಂದಿಸಿದ್ದಾರೆ