ಕಾರವಾರ: ಸಂಚಾರಿ ಠಾಣೆಯಲ್ಲಿ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎ.ಎಸ್.ಐ ಅಬ್ದುಲ್ ಖಾದರ್ ಮಹ್ಮದ್ ಶೇಖ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತದಿಂದ ಸಾವು ಕಂಡ ಘಟನೆ ನಗರದಲ್ಲಿ ನಡೆದಿದೆ.
ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಹಮ್ಮದ್ ಶೇಖ್ (57) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಇವರು 1992 ರಲ್ಲಿ ಪೊಲೀಸ್ ಕಾನಸ್ಟೇಬಲ್ ಹುದ್ದೆ ಮೂಲಕ ಪೊಲೀಸ್ ಇಲಾಖೆಯಲ್ಲಿ ಭರ್ತಿಯಾಗಿದ್ದರು.
ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗ್ರಾಮೀಣ, ಕುಮಟಾ , ದಾಂಡೇಲಿ ನಗರ,ಜೊಯಿಡಾ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2019 ರಲ್ಲಿ ಪದೋನ್ನತಿ ಪಡೆದು ಎಎಸ್ ಐ ಆಗಿ ಕಾರವಾರ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು. ಮೃತರ ಅಗಲಿಕೆಗೆ ಎಸ್. ಪಿ ಸುಮನಾ ಡಿ ಪೆನ್ನೆಕರ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.