
ಶಿರಸಿ: ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದಂತೆ ಯುವ ನಾಯಕ, ಕಾಂಗ್ರೆಸ್ ಪಕ್ಷದ ಕಿಸಾನ್ ಸಮಿತಿಯ ರಾಜ್ಯ ಕಾರ್ಯದರ್ಶಿ ಶ್ರೀಪಾದ ಹೆಗಡೆ ಕಡವೆ ತಾನು ಟಿಕೆಟ್ ಆಕಾಂಕ್ಷಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಕೋವಿಡ್ ಸಂಕಷ್ಟದಲ್ಲಿ ಜನರಿಗೆ ಸೂಕ್ತ ಸ್ಪಂದನೆ ನೀಡದೆ ಇರುವದು, ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿ ಕುಂಠಿತಗೊಂಡಿರುವ ಕಾರಣ ಅವರ ಜನಪ್ರಿಯತೆ ಕ್ಷೀಣಿಸಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಚ್ಚಳವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳೆಲ್ಲ ಕ್ಷೇತ್ರದ ಸಮಸ್ಯೆ ಅರಿವು ಉಳ್ಳವರಾಗಿದ್ದು, ಪರಿಹಾರ ಒದಗಿಸುವಲ್ಲಿ ಸಮರ್ಥರಿದ್ದಾರೆ ಇವರಲ್ಲಿ ಯಾರೇ ಟಿಕೆಟ್ ಪಡೆದರು ಸಂತೋಷದಿಂದ ಬೆಂಬಲಿಸುವದಾಗಿ ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಆರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಉತ್ತಮ ಅವಕಾಶವಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ಶ್ರಮವಹಿಸುವದಾಗಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ ದೊಡ್ಡೂರ್ ಪಕ್ಷದ ಹಾಗೂ ಸಾಮಾಜಿಕ ಕೆಲಸದಲ್ಲಿ ಚುರುಕಾಗಿ ಕೆಲಸ ನಿರ್ವಹಿಸುತ್ತಿದ್ದು ಅವರ ಟಿಕೆಟ್ ಬೇಡಿಕೆಯನ್ನು ಅನುಮೋದಿಸುವದಾಗಿ ಅವರು ಹೇಳಿದ್ದಾರೆ.